ಚೀನಾ ಉತ್ತರ ಕೊರಿಯಾಕ್ಕೆ ತೈಲ ಪೂರೈಸುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದೆ: ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್, ಡಿ.29: ಚೀನಾವು ಉತ್ತರ ಕೊರಿಯಾಕ್ಕೆ ತೈಲವನ್ನು ಪೂರೈಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಇಂಥ ನಡವಳಿಕೆಗಳು ಪ್ಯೊಂಗ್ಯಾಗ್‌ನ ಪರಮಾಣು ಕಾರ್ಯಕ್ರಮದ ಬಗ್ಗೆಯಿರುವ ಜಟಿಲತೆಯ ಸ್ನೇಹಪೂರ್ವಕ ಪರಿಹಾರಕ್ಕೆ ತಡೆಯುಂಟುಮಾಡಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ಚೀನಾ ಉತ್ತರ ಕೊರಿಯಾಕ್ಕೆ ತೈಲ ಪೂರೈಸುವುದನ್ನು ತಿಳಿದು ದು:ಖವಾಗಿದೆ. ಇದು ಹೀಗೆಯೇ ಮುಂದುವರಿದರೆ ಉತ್ತರ ಕೊರಿಯಾದ ಸಮಸ್ಯೆಗಳಿಗೆ ಸ್ನೇಹಪೂರ್ವ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಚೀನಾ ಮತ್ತು ಉತ್ತರ ಕೊರಿಯಾದ ಹಡಗುಗಳು ಸಮುದ್ರ ಮಧ್ಯೆ ಅಕ್ರಮವಾಗಿ ಸಂಧಿಸುತ್ತಿದ್ದು ಉತ್ತರ ಕೊರಿಯಾಕ್ಕೆ ತೈಲ ಸರಬರಾಜು ಮಾಡುತ್ತಿದೆ ಎಂದು ದಕ್ಷಿಣ ಕೊರಿಯಾದ ಸುದ್ದಿಪತ್ರಿಕೆಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಗುರುವಾರ ಹೇಳಿಕೆ ನೀಡಿದ ಚೀನಾ, ನಮ್ಮ ಹಡಗು ತೈಲ ಮಾರಾಟಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯಲ್ಲೂ ಸಂಯುಕ್ತ ರಾಷ್ಟ್ರದ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿತ್ತು.
ಶುದ್ಧೀಕೃತ ಪೆಟ್ರೋಲಿಯಂ ಮತ್ತು ಕಲ್ಲಿದ್ದಲನ್ನು ಅಕ್ರಮವಾಗಿ ಉತ್ತರ ಕೊರಿಯಾಕ್ಕೆ ಪೂರೈಸುವ ಹಡಗುಗಳ ಬಗ್ಗೆ ಅಮೆರಿಕ ಸರಕಾರಕ್ಕೆ ಮಾಹಿತಿಯಿತ್ತು. ಚೀನಾ ಹಾಗೂ ಇತರ ದೇಶಗಳ ಮಾಲಕತ್ವದ ಹಡಗುಗಳು ಈ ರೀತಿಯ ಕಾರ್ಯದಲ್ಲಿ ತೊಡಗಿರುವ ಬಗ್ಗೆ ನಮಗೆ ಸಾಕ್ಷಿ ದೊರಕಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾದ ಹಡಗುಗಳು ಉತ್ತರ ಕೊರಿಯಾದ ಹಡಗುಗಳಿಗೆ ತೈಲವನ್ನು ವರ್ಗಾಯಿಸುವುದನ್ನು ಅಮೆರಿಕದ ಬೇಹುಗಾರಿಕ ಉಪಗ್ರಹಗಳು ಪತ್ತೆಮಾಡಿದ್ದು ಕಳೆದ ಅಕ್ಟೋಬರ್‌ನಿಂದ ಮೂವತ್ತು ಬಾರಿ ಈ ರೀತಿ ತೈಲವನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಚೀನಾ, ಉತ್ತರ ಕೊರಿಯಾದ ಸುತ್ತಮುತ್ತಲ ದೇಶಗಳು ಮತ್ತು ಪ್ರಮುಖ ವ್ಯಾಪಾರ ಜೊತೆಗಾರ ದೇಶದ ಸಂಪೂರ್ಣ ಸಹಕಾರ ಅಗತ್ಯವಾಗಿದ್ದು, ಯುದ್ಧವೂ ಸೇರಿದಂತೆ ಇತರ ಹಲವು ಸಾಧ್ಯತೆಗಳೂ ನಮ್ಮ ಮುಂದಿವೆ ಎಂದು ಅಧಿಕಾರಿಗಳು ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ.
ಇತ್ತೀಚೆಗೆ ಉತ್ತರ ಕೊರಿಯಾ ಅಂತರ್‌ಖಂಡಾಂತರ ಬಾಲ್ಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಸಂಯುಕ್ತ ರಾಷ್ಟ್ರದ ಭದ್ರತಾ ಮಂಡಳಿ ಉ.ಕೊರಿಯಾ ಮೇಲೆ ಹೊಸ ನಿರ್ಬಂಧಗಳನ್ನು ಹೇರಿತ್ತು. ಇದರಲ್ಲಿ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಕಚ್ಚಾತೈಲದ ಪೂರೈಕೆ ಮೇಲೆ ಮಿತಿ ಹೇರುವ ಪ್ರಸ್ತಾಪವೂ ಇತ್ತು.