ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
ಚಿಕಾಗೊ, ಡಿ.29: 19ರ ಹರೆಯದ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕದ ಇಲಿನೊಯಿಸ್ ರಾಜ್ಯದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಗುಜರಾತ್ ನಡ್ಯಾಡ್‌ನ ಅರ್ಶದ್ ವಹೊರ ಎಂದು ಗುರುತಿಸಲಾಗಿದೆ.
ಘಟನೆಯು ಡೋಲ್ಟನ್‌ನಲ್ಲಿರುವ ಗ್ಯಾಸ್ ಸ್ಟೇಶನ್‌ನಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ ಹನ್ನೊಂದು ಗಂಟೆಗೆ ಸಂಭವಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ. ಡೋಲ್ಟನ್‌ನ ಗ್ಯಾಸ್ ಸ್ಟೇಶನ್‌ನಲ್ಲಿ ವೊಹರ ಅನಿಲ ತುಂಬಿಸುತ್ತಿದ್ದ ವೇಳೆ ಅಲ್ಲಿಗಾಗಮಿಸಿದ ಡಕಾಯಿತರು ಅವರು ಮೇಲೆ ಗುಂಡು ಹಾರಿಸಿದ್ದಾರೆ. ಅರ್ಶದ್‌ರ 55ರ ಹರೆಯದ ಸಂಬಂಧಿಕರೊಬ್ಬರು ಕೂಡಾ ಇದೇ ಗ್ಯಾಸ್ ಸ್ಟೇಶನ್‌ನಲ್ಲಿ ಕೆಲಸ ಮಾಡುತ್ತಿದ್ದು ಅವರ ಮೇಲೆಯೂ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಅರ್ಶದ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಅವರ ಸಂಬಂಧಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದು ಅವರಿಗಾಗಿ ಶೋಧಕಾರ್ಯ ಮುಂದುವರಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಕೊಲೆಗಾರರ ಮಾಹಿತಿ ನೀಡಿದಲ್ಲಿ 12,000 ಡಾಲರ್ ಬಹುಮಾನ ನೀಡುವುದಾಗಿ ಸ್ಥಳೀಯಾಡಳಿತ ಘೋಷಿಸಿದೆ.
ಅಮೆರಿಕದಲ್ಲಿ ಭಾರತೀಯರ ಮೇಲೆ ಮತ್ತು ಭಾರತ ಮೂಲದ ಅಮೆರಿಕನ್‌ಗಳ ಮೇಲೆ ಇತ್ತೀಚಿನ ದಿನಗಳಲ್ಲಿ ದಾಳಿಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಮೆರಿಕದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಅಲ್ಲಿನ ಸರಕಾರಕ್ಕೆ ಮನವಿ ಮಾಡಿದ್ದಾರೆ.