×
Ad

ಅಮಾಸೆಬೈಲು: ಗೋ ಸಾಗಾಟಕರಿಗೆ ರಾಡ್‌ನಿಂದ ಹಲ್ಲೆ; ದೂರು

Update: 2017-12-29 22:15 IST

ಅಮಾಸೆಬೈಲು, ಡಿ.29: ಬಜರಂಗದಳ ಕಾರ್ಯಕರ್ತರ ತಂಡವೊಂದು ವಾಹನದಲ್ಲಿ ದನ ಸಾಗಿಸುತ್ತಿದ್ದ ಇಬ್ಬರಿಗೆ ರಾಡ್ ಹಾಗೂ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿರುವ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ಕುಂಜೆ ಗ್ರಾಮದ ಮಾವಿನಕಟ್ಟೆಯ ಸಮಿವುಲ್ಲಾ (23) ಹಾಗೂ ಮಂಜುನಾಥ ಹಲ್ಲೆಗೆ ಒಳಗಾದವರು. ಹಲ್ಲೆಯಿಂದ ಗಾಯಗೊಂಡಿರುವ ಸಮಿವುಲ್ಲಾ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಮಂಜುನಾಥ್ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿ.28ರಂದು ಬೆಳಗಿನ ಜಾವ ಸಮಿವುಲ್ಲಾ ಹಾಗೂ ನಿಸಾರ್ ಎಂಬವರ ಬೊಲೆರೋ ವಾಹನದಲ್ಲಿ ತರಕಾರಿ ತರಲೆಂದು ಹೋಗಿದ್ದು, ನಂತರ ತರಕಾರಿ ಇಲ್ಲದ ಕಾರಣ ಅಲ್ಲಿಂದ ಸಿದ್ದಾಪುರಕ್ಕೆ ತೆರಳಿ ಅಲ್ಲಿ ಮಂಜೂರು ಎಂಬವರನ್ನು ಹತ್ತಿಸಿಕೊಂಡು ತೊಂಬಟ್ಟಿಗೆ ತೆರಳಿದ್ದರು.

ತೊಂಬಟ್ಟು ಸರ್ಕಲ್‌ನಲ್ಲಿ ಮಂಜುನಾಥ ಎಂಬವರು ತೊಂಬಟ್ಟುವಿನ ಮನೆಯೊಂದರ ಬಳಿ ಕರೆದುಕೊಂಡು ಹೋದರು. ಆ ಮನೆಯವರು ಕೊಟ್ಟಿಗೆಯಲ್ಲಿ ರುವ ದನಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದು, ಹಾಗೆ ಸಮಿವುಲ್ಲಾ ಹಾಗೂ ಇತರ ಮೂವರು ಸೇರಿ ಕೊಟ್ಟಿಗೆಯಲ್ಲಿದ್ದ ಒಟ್ಟು 12 ದನಗಳನ್ನು ವಾಹನದಲ್ಲಿ ತುಂಬಿಸಿ ಮಂಜುನಾಥ್‌ರ ಬೈಕ್ ಹಿಂಬಾಲಿಸಿಕೊಂಡು ಹೋದರು. ಸುಮಾರು 2 ಕಿ.ಮೀ ದೂರ ಹೋದಾಗ ಬೆಳಗಿನ ಜಾವ  ಉದಯ ಪೂಜಾರಿ, ಚಂದ್ರ, ರಾಘು, ಯೋಗೀಶ, ಶ್ರೀಕಾಂತ, ಪ್ರಶಾಂತ ಮತ್ತು ಇತರೆ ನಾಲ್ವರು ಅಡ್ಡಗಟ್ಟಿ ಸಮಿವುಲ್ಲಾ ಹಾಗೂ ಮಂಜುನಾಥ ರಿಗೆ ರಾಡ್ ಹಾಗೂ ಹಾಕಿ ಸ್ಟಿಕ್‌ನಿಂದ ಹೊಡೆದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News