ಉಡುಪಿ ಪರ್ಬ ಉದ್ಘಾಟಿಸಿದ ಸಚಿವ ಪ್ರಮೋದ್
ಮಲ್ಪೆ, ಡಿ.29: ಉಡುಪಿಯ ಪ್ರಮುಖ ಪ್ರವಾಸಿ ತಾಣಗಳಾದ ಮಲ್ಪೆ ಬೀಚ್, ಪಡುಕೆರೆ ಬೀಚ್ ಹಾಗೂ ಸೈಂಟ್ ಮೇರಿಸ್ ದ್ವೀಪಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಗೊಳ್ಳುವಂತೆ ಅಭಿವೃದ್ದಿಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ ಉಡುಪಿ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ, ಕರಾವಳಿ ಪ್ರವಾಸೋದ್ಯಮಗಳ ಸಂಘಟನೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಉಡುಪಿ ಪರ್ಬ ಹಾಗೂ ಅಡ್ವೆಂಚರ್ ಫೆಸ್ಟಿವಲ್’ಗೆ ಶುಕ್ರವಾರ ಸಂಜೆ ಮಲ್ಪೆ ಕಡಲ ಕಿನಾರೆಯಲ್ಲಿ ವಿದ್ಯುಕ್ತ ಚಾಲೆ ನೀಡಿ ಅವರು ಮಾತನಾಡುತಿದ್ದರು.
ಮಲ್ಪೆ ಬೀಚ್, ಪಡುಕೆರೆ ಬೀಚ್ ಮತ್ತು ಸೈಂಟ್ ಮೇರಿಸ್ ದ್ವೀಪಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಸಮುದ್ರ ತಡೆಗೋಡೆ ನಿರ್ಮಾಣ, ರಸ್ತೆಗಳ ಅಭಿವೃದ್ದಿ ಸೇರಿದಂತೆ ಈಗಾಗಲೇ 22 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಭಾರತ್ ದರ್ಶನ್ ಯೋಜನೆಯಡಿ 12 ಕೋಟಿ ರೂ. ಮಂಜೂರಾಗಿದ್ದು, ಒಟ್ಟು 32 ಕೋಟಿ ರೂ ಗಳ ಸಾರ್ವಕಾಲಿಕ ದಾಖಲೆ ಅನುದಾನವನ್ನು ಈ ಪ್ರವಾಸಿ ತಾಣಗಳ ಅಭಿವೃದ್ದಿಗೆ ವಿನಿಯೋಗಿಸಲಾಗುವುದು ಎಂದು ಸಚಿವರು ನುಡಿದರು.
ರಾಜ್ಯದಲ್ಲಿ ಸಾಹಸ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಜನರಲ್ ತಿಮ್ಮಯ್ಯ ಸಾಹಸ ಅಕಾಡಮಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಪ್ರತಿ ತಿಂಗಳು ಒಂದು ಜಿಲ್ಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ದಾಂಡೇಲಿಯಲ್ಲಿ ರಿವರ್ ರ್ಯಾಪ್ಟಿಂಗ್ ಕ್ರೀಡೆಯನ್ನು ಆಯೋಜಿಸಲಾಗಿದೆ ಎಂದರು.
ಉಡುಪಿಯಲ್ಲಿ 3 ದಿನಗಳ ಕಾಲ ನಡೆಯುವ ಉಡುಪಿ ಪರ್ಬ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತಿದ್ದು, ರಾಷ್ಟ್ರ ಮಟ್ಟದ ಈಜು ಸ್ಪರ್ಧೆ ನಾಳೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರು ನೇರವಾಗಿ ವಿಶ್ವ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ಹೇಳಿದ ಸಚಿವರು, ಪ್ರಸ್ತುತ ನಡೆಯುತ್ತಿರುವ ಉಡುಪಿ ಪರ್ಬ ಪ್ರತಿ ವರ್ಷ ನೆಯುವಂತಾಗಲಿ ಎಂದು ಹಾರೈಸಿದರು.
ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರ್ಶೀವಚನ ನೀಡಿದರು. ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸುಬಾಷ್‌ಚಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರವಾಲ್, ಜಿಪಂ ಸಿಇಓ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ಕೋಸ್ಟಲ್ ಟೂರಿಸಂನ ಮನೋಹರ್ ಶೆಟ್ಟಿ, ಪ್ರಸಿದ್ದ ಡ್ರಮ್ ವಾದಕ ಶಿವಮಣಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಸ್ವಾಗತಿಸಿದರು. ಪೌರಾಯುಕ್ತ ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು.
ಉಡುಪಿ ಪರ್ಬದ ಅಂಗವಾಗಿ ಇಂದು ಮರಳುಶಿಲ್ಪ ರಚನೆ ಹಾಗೂ ಗಾಳಿ ಪಟ ಸ್ಪರ್ಧೆಗಳು ನಡೆದಿವೆ. ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಸಿದ್ದ ಸಂಗೀತಗಾರ ಶಿವಮಣಿ ಮತ್ತು ತಂಡದಿಂದ ವಾದ್ಯ ಸಂಗೀತ ಕಾರ್ಯಕ್ರಮ ನಡೆಯಿತು.