×
Ad

ಉಡುಪಿ: ‘ಕುವೆಂಪು ಮಹಾನ್ ಮಾನವತಾವಾದಿ’

Update: 2017-12-29 22:28 IST

ಉಡುಪಿ, ಡಿ.29: ವಿಶ್ವ ಮಾನವ ಸಂದೇಶ ನೀಡಿದ ಕವಿ ಕುವೆಂಪು ಸದಾ ಸ್ಮರಣೀಯರು. ಅವರ ಸಾಹಿತ್ಯದಲ್ಲಿರುವ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಾಹಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವುಗಳ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಪ್ರಯುಕ್ತದ ‘ವಿಶ್ವ ಮಾನವ ದಿನಾಚರಣೆ-2017’ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕವಿ ಕುವೆಂಪು ಮಹಾನ್ ಮಾನವತಾವಾದಿ. ಅವರ ಸಾಹಿತ್ಯ ಸಮಾಜದ ಪ್ರತಿಯೊಬ್ಬರಿಗೂ ಅತ್ಯುತ್ತಮ ಜೀವನ ಮಾದರಿಯನ್ನು ತೋರಿಸುತ್ತಿದೆ. ಸಾಹಿತ್ಯ ನಮ್ಮ ಜೀವನದ ದೃಷ್ಟಿಕೋನವನ್ನು ವಿಸ್ತರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ನಾಡಿಗೆ ಸಾಹಿತ್ಯಲೋಕದ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಹಾನ್ ಸಾಹಿತಿ ಕುವೆಂಪು, ಅವರ ಸಾಹಿತ್ಯಗಳು ವಿದ್ವತ್‌ನಿಂದ ಕೂಡಿದ್ದು, ಇಡೀ ಜಗತ್ತಿಗೆ ದಾರಿದೀಪವಾಗಿದೆ ಎಂದವರು ನುಡಿದರು.

ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿ. ರೇಖಾ ಬನ್ನಾಡಿ ಮಾತನಾಡಿ, 20ನೇ ಶತಮಾನದ ಅದ್ಭುತ ಪ್ರತಿಭೆ ಹಾಗೂ ಸಮಾಜದ ಸಾಕ್ಷಿಪ್ರಜ್ಞೆಯಂತಿರುವ ಈ ನಾಡಿನ ಶ್ರೇಷ್ಠ ಕವಿ ಕುವೆಂಪು. ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹೆಗ್ಗಳಿಕೆ ಇವರದ್ದು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೇಕರ್, ಕಾಲೇಜಿನ ಪ್ರಾಂಶುಪಾಲ ವಿವೇಕ್ ಕುಮಾರ್, ಪ್ರಾಂಶುಪಾಲ ವಿಲಾಸ್ ನಾಯಕ್ ಉಪಸ್ಥಿತರಿದ್ದರು.

ಕನ್ನಡ ಸಂಸ್ಕೃತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಸುಮಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News