ಜಯರಾಮ ಆಚಾರ್ಯರಿಗೆ ಚಿಕಿತ್ಸೆಗೆ ನೆರವು ನೀಡಲು ಮನವಿ

Update: 2017-12-29 18:09 GMT

ಉಪ್ಪಿನಂಗಡಿ, ಡಿ. 29: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪಿಲಿಗೂಡು ಜನತಾ ಕಾಲನಿ ನಿವಾಸಿ ಜಯರಾಮ ಆಚಾರ್ಯ ಶ್ವಾಸಕೋಶದ  ರೋಗದಿಂದ ಬಳಲುತ್ತಿದ್ದು, ಬಡ ಕುಟುಂಬದವರಾದ ಇವರು ಚಿಕಿತ್ಸೆಗೆ ಸಹೃದಯರ ನೆರವು ಯಾಚಿಸಿದ್ದಾರೆ.

55ರ ಹರೆಯದ ಜಯರಾಮ ಆಚಾರ್ಯ ಅವರು ಮರದ ಕೆಲಸ ಮಾಡುತ್ತಾ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಅವರಿಗೆ ಅರ್ಬುದ ರೋಗ ಕಾಣಿಸಿಕೊಂಡ ಬಳಿಕ ಇವರ ಕುಟುಂಬದ ಆಧಾರ ಸ್ತಂಭವೇ ಕುಸಿದು ಬಿದ್ದಿದ್ದು, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದ ಇವರು ಇದೀಗ ಹಣಕಾಸಿನ ತೊಂದರೆಯಿಂದ ಆಸ್ಪತ್ರೆಯಿಂದ ಮನೆಗೆ ತೆರಳಿ ಸಕಲೇಶಪುರ ಬಳಿಯ ಕೊಡ್ಲಿಪೇಟೆ ಎಂಬಲ್ಲಿಂದ ಹಳ್ಳಿ ಮದ್ದನ್ನು ಮಾಡುತ್ತಿದ್ದಾರೆ. ಇವರ ಕಾಯಿಲೆ ಇದೀಗ ಇನ್ನಷ್ಟು ಉಲ್ಬಣಗೊಂಡಿದ್ದು, ಮಲಗಿದ್ದಲ್ಲೇ ಇದ್ದಾರೆ. ಆದರೆ ಆಸ್ಪತ್ರೆಯ ಚಿಕಿತ್ಸೆ ಖರ್ಚನ್ನು ಭರಿಸಲು ಇವರಲ್ಲಿ ಹಣವಿಲ್ಲದಂತಾಗಿದೆ. ಜಯರಾಮ ಆಚಾರ್ಯ ಅವರ ಕುಟುಂಬಕ್ಕೆ ಇದೀಗ ಅವರ ಪತ್ನಿಯ ದುಡಿಮೆಯೇ ಆಧಾರವಾಗಿದೆ. ಮತ್ತೊಂದೆಡೆ ಆರ್ಥಿಕ ಸಂಕಷ್ಟದಿಂದ ಅವರ ಪುತ್ರ ಕೂಡಾ  ಶಿಕ್ಷಣವನ್ನು ಪಿಯುಸಿಯಲ್ಲಿಯೇ ಮೊಟಕುಗೊಳಿಸಿ, ಕುಟುಂಬದ ನಿರ್ವಹಣೆಗೆ ಹೆಗಲು ನೀಡುತ್ತಿದ್ದಾನೆ. ಪುತ್ರಿ 8ನೇ ತರಗತಿ ಓದುತ್ತಿದ್ದಾಳೆ. ಇವರ ಕುಟುಂಬಕ್ಕೀಗ ಜೀವನ ನಿರ್ವಹಣೆಗೆ ಕಷ್ಟವಾಗಿದೆ.

ಈಗಾಗಲೇ ಕಣಿಯೂರು ಗ್ರಾ.ಪಂ. ಅಧ್ಯಕ್ಷ ಸುನೀಲ್ ಸಾಲ್ಯಾನ್ ಅವರು ಇವರ ಸಂಕಷ್ಟಕ್ಕೆ ಮರುಗಿ ತನ್ನ ಕೈಯಲ್ಲಾದಷ್ಟು ನೆರವು ನೀಡಿದ್ದು, ಸಹೃದಯರು ಇವರಿಗೆ ಸೂಕ್ತ ನೆರವು ದೊರಕಿಸಿಕೊಡಲು ವಿನಂತಿಸಿದ್ದಾರೆ.

ಜಯರಾಮ ಆಚಾರ್ಯ ಅವರ ಚಿಕಿತ್ಸೆಗೆ ನೆರವು ನೀಡುವವರು ಅವರ ಪತ್ನಿ ರಾಜೀವಿ ಅವರ ಹೆಸರಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಖಾತೆಗೆ ನೆರವು ನೀಡಬಹುದಾಗಿದೆ. ಅವರ ಅಕೌಂಟ್ ನಂಬರ್: 02142210002120, ಐಎಫ್‌ಎಸ್‌ಸಿ ಕೋಡ್: ಎಸ್‌ವೈಎನ್‌ಬಿ: 0000214, ಹೆಚ್ಚಿನ ಮಾಹಿತಿಗಾಗಿ ರಾಜೀವಿ ಅವರ ಮೊಬೈಲ್ ಸಂಪರ್ಕ ಸಂಖ್ಯೆ (8197851633)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News