ಇರುಳಿಗರ ಕಾಲನಿಯಲ್ಲಿ ಸಚಿವ ಆಂಜನೇಯ ಹೊಸ ವರ್ಷಾಚರಣೆ

Update: 2017-12-30 12:56 GMT

ಬೆಂಗಳೂರು, ಡಿ.30: ಪ್ರತಿ ವರ್ಷದಂತೆ ಈ ವರ್ಷವೂ ಡಿ.31ರಾತ್ರಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಾಡಬಾಳ್ ಗ್ರಾಮ ವ್ಯಾಪ್ತಿಯ ಜೇನುಕಲ್ಲುಪಾಳ್ಯದ ಇರುಳಿಗರ ಕಾಲನಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿಯೆ ಹೊಸ ವರ್ಷ ಆಚರಣೆ ಹಾಗೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬುಡಕಟ್ಟು ಜನಾಂಗವಾದ ಇರುಳಿಗರು ರಾಜ್ಯದಲ್ಲಿ ಕೆಲವೇ ಭಾಗಗಳಲ್ಲಿ ವಾಸಿಸುತ್ತಿದ್ದು, ಇದೇ ಡಿ.31ರ ರಾತ್ರಿ ಇರುಳಿಗರ ಕಾಲನಿಯಲ್ಲಿಯೇ ವಾಸ್ತವ್ಯ ಹೂಡಿ ಹೊಸ ವರ್ಷ ಆಚರಣೆ ಹಾಗೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.

ಇರುಳಿಗರ ಜೀವನದಲ್ಲಿ ಹೊಸ ಬೆಳಕು ಮೂಡಿಸಲು ಅವರ ಅವರ ಶ್ರೇಯೋಭಿವೃದ್ಧಿಗಾಗಿ ನಾಂದಿ ಹಾಡಲು ನಿರ್ಧರಿಸಲಾಗಿದ್ದು, ರಾಜ್ಯ ಸರಕಾರ ಈ ಸಮಾಜಕ್ಕೆ ಪ್ರತ್ಯೇಕ ಪ್ಯಾಕೇಜ್‌ನ್ನು ಡಿ.31ರ ಸಂಜೆ ಘೋಷಿಸಲಾಗುವುದು. ಅಲ್ಲದೆ, ಸರಕಾರವೆ ಜನರ ಮನೆ ಬಾಗಿಲಿಗೆ ತೆರಳಿ ಯೋಜನೆಗಳನ್ನು ಘೋಷಿಸುವ ಹಾಗೂ ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕಳೆದ ನಾಲ್ಕು ವರ್ಷದಿಂದ ಪ್ರತಿ ಹೊಸ ವರ್ಷವನ್ನು ಬುಡಕಟ್ಟು ಜನಾಂಗ ವಾಸಿಸುವ ಹಾಡಿಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಕಾರವಾರ, ಮೈಸೂರು, ಉಡುಪಿ ಜಿಲ್ಲೆಗಳಲ್ಲಿನ ಆದಿವಾಸಿಗಳ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್ ನೀಡಲಾಗುತ್ತಿದೆ ಎಂದು ಹೇಳಿದರು.

 ಜೇನುಕಲ್ಲುಪಾಳ್ಯದ ಇರುಳಿಗರ ಕಾಲನಿಯಲ್ಲಿ ಡಿ.31ರ ಸಂಜೆ ಆಯೋಜಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಸಂಸದ ಡಿ.ಕೆ.ಸುರೇಶ್, ಶಾಸಕ ಬಾಲಕೃಷ್ಣ ಸೇರಿ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 300 ಫಲಾನುಭವಿಗಳಿಗೆ 7.5 ಕೋಟಿ, ಸಿ.ಸಿ.ರಸ್ತೆ, ಬೀದಿ ದೀಪ, ಚರಂಡಿ ಇತರೆ ಅವಶ್ಯ ಕಾಮಗಾರಿಗೆ 5 ಕೋಟಿ., ಕುಡಿಯುವ ನೀರಿಗೆ 1 ಕೋಟಿ, 150 ಹೊಸ ಮನೆಗಳ ನಿರ್ಮಾಣಕ್ಕೆ 2.5 ಕೋಟಿ, ಹಳೆ ಮನೆಗಳ ದುರಸ್ಥಿಗೆ 35 ಲಕ್ಷ ರೂ., 100 ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ 1.5 ಲಕ್ಷದಂತೆ ಕಿರು ಸಾಲ 1.5 ಕೋಟಿ, ಸಿದ್ಧಿ ಜನಾಂಗಕ್ಕೆ ಸಮುದಾಯ ಭವನ ನಿರ್ಮಾಣ 1 ಕೋಟಿ, ಯಲ್ಲಾಪೂರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ 15 ಕೋಟಿ, ಹಳಿಯಾಳದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 15 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News