ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವು ನಿರಾಕರಿಸಿದ ಗ್ರಾಮಸ್ಥರು
ಕಟಕ್, ಡಿ.30: ಬಹಿಷ್ಕಾರಕ್ಕೆ ಒಳಗಾಗಿದ್ದ ಮಹಿಳೆಯೋರ್ವಳ ಅಂತ್ಯಸಂಸ್ಕಾರಕ್ಕೆ ನೆರವಾಗಲು ಗ್ರಾಮಸ್ಥರು ನಿರಾಕರಿಸಿದ ಕಾರಣ ಎರಡು ದಿನದ ಬಳಿಕ ಅಂತ್ಯಸಂಸ್ಕಾರ ನಡೆಸಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಮಲ್ಕಾನ್‌ಗಿರಿ ಜಿಲ್ಲೆಯ ನೌಗಡ ಗ್ರಾಮದ ನಿವಾಸಿ, ಕ್ಷತ್ರಿಯ ಜಾತಿಯ ಕಮಲಾ ಎಂಬ ಮಹಿಳೆಯ ಮಗ ಲಕ್ಷ್ಮಣ್ ಎಂಬಾತ ಜಾಡಮಾಲಿ(ಬೀದಿ ಸ್ವಚ್ಛಗೊಳಿಸುವ) ಕೆಲಸ ಹಾಗೂ ಹೆಣ ದಫನ ಮಾಡುವ ಕಾರ್ಯ ನಿರ್ವಹಿಸಿ ಜಾತಿಯ ಘನತೆ, ಗೌರವಕ್ಕೆ ಕುಂದುಂಟು ಮಾಡಿದ್ದಾನೆ ಎಂಬ ಕಾರಣಕ್ಕೆ ಈ ಮಹಿಳೆಯ ಕುಟುಂಬಕ್ಕೆ 7 ವರ್ಷದ ಹಿಂದೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿತ್ತು. ಲಕ್ಷ್ಮಣ್ ತೀರಿಹೋದ ಬಳಿಕವೂ ಬಹಿಷ್ಕಾರ ಮುಂದುವರಿದಿತ್ತು.
ಈ ಮಧ್ಯೆ, ಕಮಲಾ ನಿಧನರಾದಾಗ ಆಕೆಯ ಸೊಸೆ ಮತ್ತು ಮೊಮ್ಮಗ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ಗ್ರಾಮಸ್ಥರ ನೆರವು ಯಾಚಿಸಿದ್ದಾರೆ. ಆದರೆ ಈ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಕಾರಣ ನೆರವು ನೀಡಲು ಗ್ರಾಮಸ್ಥರು ನಿರಾಕರಿಸಿದ್ದು ಈ ವೇಳೆ ಸ್ಥಳೀಯ ವಾರ್ಡ್ ಸದಸ್ಯ ಸುಭ್ರಾಂಸು ಗ್ರಾಮಸ್ಥರ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಬಳಿಕ, ಪುರಿಯ ಖ್ಯಾತ ಜಗನ್ನಾಥ ದೇವಳಕ್ಕೆ 1,000 ರೂ. ಮೊತ್ತವನ್ನು ಮಹಾಪ್ರಸಾದ ಎಂದು ಅರ್ಪಿಸುವಂತೆ ಹಾಗೂ ಬಹಿಷ್ಕಾರ ವಾಪಾಸು ಪಡೆದು ಕುಟುಂಬವನ್ನು ಮತ್ತೆ ಜಾತಿಗೆ ಸೇರ್ಪಡೆಗೊಳಿಸಲು 3,000 ರೂ. ದಂಡ ತೆರುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಈ ಮೊತ್ತ ಪಾವತಿಸಿದ ಬಳಿಕ (ಮಹಿಳೆ ಮೃತಪಟ್ಟು ಎರಡು ದಿನದ ಬಳಿಕ) ಅಂತ್ಯಸಂಸ್ಕಾರ ನಡೆಸಲಾಗಿದೆ.
ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಮಲ್ಕಾನ್‌ಗಿರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.