ಸ್ಮಾರ್ಟ್ ಸಿಟಿ ಯೋಜನೆ: ರೂ. 9,860 ಕೋಟಿಯಲ್ಲಿ ವೆಚ್ಚ ಮಾಡಿದ್ದು ಕೇವಲ ರೂ. 645 ಕೋಟಿ

Update: 2017-12-30 13:47 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಡಿ.30: ಸ್ಮಾರ್ಟ್ ಸಿಟಿ ಯೋಜನೆಯಡಿ ಅರ್ವತ್ತು ನಗರಗಳಿಗೆ ಬಿಡುಗಡೆ ಮಾಡಲಾದ ರೂ. 9,860 ಕೋಟಿಯಲ್ಲಿ ಕೇವಲ 7% ಅಥವಾ ರೂ. 645 ಕೋಟಿ ಮಾತ್ರ ಈವರೆಗೆ ವೆಚ್ಚ ಮಾಡಲಾಗಿದೆ ಎಂಬ ವರದಿಯು ನಗರ ವ್ಯವಹಾರಗಳ ಸಚಿವಾಲಯವನ್ನು ಚಿಂತೆಗೀಡು ಮಾಡಿದೆ.

 40 ನಗರಗಳ ಪೈಕಿ ಪ್ರತಿ ನಗರಗಳಿಗೆ ಬಿಡುಗಡೆ ಮಾಡಲಾದ ರೂ. 196 ಕೋಟಿಯಲ್ಲಿ ಅಹ್ಮದಾಬಾದ್ ಅತೀಹೆಚ್ಚು ರೂ. 80.15 ಕೋಟಿ ಖರ್ಚು ಮಾಡಿದೆ. ಇಂದೋರ್ ರೂ. 70.69 ಕೋಟಿ, ಸೂರತ್ ರೂ. 43.41 ಕೋಟಿ ಮತ್ತು ಭೋಪಾಲ್ ರೂ. 42.86 ಕೋಟಿ ವೆಚ್ಚ ಮಾಡಿದೆ ಎಂದು ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತವೆ.

ಬಿಡುಗಡೆ ಮಾಡಲಾದ ನಿಧಿಯಲ್ಲಿ ಅಂಡಮಾನ್ ಮತ್ತು ನಿಕೊಬಾರ್ ಕೇವಲ ರೂ. 54 ಲಕ್ಷ ವೆಚ್ಚ ಮಾಡಿದ್ದರೆ ರಾಂಚಿ ರೂ. 35 ಲಕ್ಷ ಮತ್ತು ಔರಂಗಾಬಾದ್ ರೂ. 85 ಲಕ್ಷ ಖರ್ಚು ಮಾಡಿದೆ.

ಇನ್ನು ಯೋಜನೆಯಡಿ ರೂ. 111 ಕೋಟಿ ಗಳಿಸಿದ ನಗರಗಳ ಪೈಕಿ ವಡೋದರ ರೂ. 20.62 ಕೋಟಿ ಖರ್ಚು ಮಾಡಿದ್ದರೆ ಸಿಕ್ಕಿಂನ ನಾಮ್ಚಿ ರೂ. 6.80 ಕೋಟಿ ವೆಚ್ಚ ಮಾಡಿದೆ. ಇನ್ನು ತಮಿಳುನಾಡಿನ ಸೇಲಂ, ವೆಲ್ಲೋರ್ ಮತ್ತು ತಾಂಜಾವೂರು ಕ್ರಮವಾಗಿ ರೂ. ಐದು ಲಕ್ಷ, ರೂ. ಆರು ಲಕ್ಷ ಮತ್ತು ರೂ. 19 ಲಕ್ಷ ವೆಚ್ಚ ಮಾಡಿದೆ.

ಈ ಅತೃಪ್ತಿದಾಯಕ ಅಭಿವೃದ್ಧಿಯಿಂದ ಸಚಿವಾಲಯವು ತೀವ್ರ ಚಿಂತೆಗೀಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಡಿಮೆ ಖರ್ಚು ಮಾಡಿರುವ ನಗರಗಳಿಗೆ ತೆರಳಿ ಅಲ್ಲಿ ಯೋಜನೆಯ ಅನುಷ್ಟಾನಕ್ಕೆ ಇರುವ ತಡೆಗಳನ್ನು ಪರಿಶೀಲಿಸಿ ಆದಷ್ಟು ಬೇಗ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ತೊಂಬತ್ತು ನಗರಗಳನ್ನು ಆಯ್ಕೆ ಮಾಡಲಾಗಿದ್ದು ಯೋಜನೆಯ ಅನುಷ್ಟಾಕ್ಕಾಗಿ ಪ್ರತಿ ನಗರಗಳು ಕೂಡಾ ಕೇಂದ್ರ ಸರಕಾರದಿಂದ ರೂ. 500 ಕೋಟಿ ಅನುದಾನ ಪಡೆಯಲಿದೆ.

ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಮಧ್ಯಪ್ರದೇಶ, ಛತ್ತೀಸ್‌ಘಡ್, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯೋಜನೆಯನ್ನು ಉತ್ತಮವಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಆದರೆ ಪಂಜಾಬ್, ಹಿಮಾಚಲ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಯೋಜನೆಗೆ ಹಿನ್ನಡೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು.

ನಗರಗಳ ಮಧ್ಯೆ ಸ್ಪರ್ಧೆಯನ್ನುಂಟುಮಾಡಲು ಮತ್ತು ಯೋಜನೆಯನ್ನು ತ್ವರಿತವಾಗಿ ಅನುಷ್ಟಾನಗೊಳಿಸುವ ಸಲುವಾಗಿ ಕೇಂದ್ರ ಸರಕಾರ ಮುಂದಿನ ವರ್ಷ ಜೂನ್‌ನಲ್ಲಿ ಅತ್ಯುತ್ತಮವಾಗಿ ಯೋಜನೆಯನ್ನು ಅನುಷ್ಟಾನಕ್ಕೆ ತಂದ ನಗರಗಳಿಗೆ ಸ್ಮಾರ್ಟ್ ಸಿಟಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News