ಕೋಮುಗಲಭೆಗೆ ಪ್ರಚೋದನೆ: ದ.ಕ. ಜಿಲ್ಲೆಯಿಂದ ಇಬ್ಬರ ಗಡಿಪಾರಿಗೆ ಜಿಲ್ಲಾಧಿಕಾರಿ ಆದೇಶ
ಬಂಟ್ವಾಳ, ಡಿ. 30: ದ.ಕ. ಜಿಲ್ಲೆಯಲ್ಲಿ ನಡೆಯುವ ಕೋಮುಗಲಭೆಗೆ ಮೂಲ ಕಾರಣರಾಗುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರನ್ನು ಆರು ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಲು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕದ ನಿವಾಸಿಗಳಾದ ರತ್ನಾಕರ ಶೆಟ್ಟಿ ಹಾಗೂ ಖಲೀಲ್ ಗಡಿಪಾರಿಗೆ ಒಳಗಾದವರು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಎಸ್ಪಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಜೂನ್ ತಿಂಗಳಲ್ಲಿ ಪರಸ್ಪರ ಹಲ್ಲೆ ಮಾಡಿ ಮತೀಯ ಗಲಭೆಗೆ ಕಾರಣರಾಗಿದ್ದರು ಎಂದು ಈ ಇಬ್ಬರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇವರ ಗಡಿಪಾರಿಗೆ ಕೋರಿ ಜಿಲ್ಲಾಧಿಕಾರಿಗೆ ಎರಡು ತಿಂಗಳ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಅವರು ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದು, ಈ ಆದೇಶದ ಅನ್ವಯ ಇಬ್ಬರನ್ನೂ ದ.ಕ. ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರತ್ನಾಕರ ಶೆಟ್ಟಿ ವಶಕ್ಕೆ: ಆದೇಶ ಹೊರಬೀಳುತ್ತಿದ್ದಂತೆ ಬಂಟ್ವಾಳ ಪೊಲೀಸರು ರತ್ನಾಕರ ಶೆಟ್ಟಿಯನ್ನು ಬೆಳಗ್ಗೆ ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದಂತೆ ದಾರಿ ಮಧ್ಯೆ ವಶಕ್ಕೆ ಪಡೆದು ದ.ಕ. ಜಿಲ್ಲೆಯ ಗಡಿ ದಾಟಿಸಿ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.