ಉ.ಪ್ರದೇಶ: ಗುಂಪು ಘರ್ಷಣೆಯಲ್ಲಿ 12 ರೈತರಿಗೆ ಗಾಯ
ಲಕ್ನೊ, ಡಿ.30: ಬೀದಿ ಜಾನುವಾರುಗಳನ್ನು ಓಡಿಸುವ ವಿಷಯದ ಕುರಿತು ರೈತರ ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ 12 ರೈತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಜರಿಯಾ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಈ ಘಟನೆಗೆ ಸಂಬಂಧಿಸಿ ಎಂಟು ರೈತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲೆಮಾರಿ ದನಗಳನ್ನು ತಮ್ಮ ಪ್ರದೇಶದಿಂದ ಹೊಡೆದೋಡಿಸುವ ವಿಷಯದಲ್ಲಿ ಚಿಬೌಲಿ ಹಾಗೂ ಮಗ್ರಾಲ್ ಗ್ರಾಮಸ್ಥರ ಮಧ್ಯೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ದೊಣ್ಣೆಯಿಂದ ಬಡಿದಾಡಿಕೊಂಡಿದ್ದಾರೆ. ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯೂ ನಡೆದಿದೆ ಎಂದು ಜರಿಯಾ ವೃತ್ತ ನಿರೀಕ್ಷಕ ರಜನೀಶ್ ಉಪಾಧ್ಯಾಯ ತಿಳಿಸಿದ್ದಾರೆ. ಎರಡೂ ಗುಂಪಿಗೆ ಸೇರಿದ 12 ರೈತರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಬೌಲಿ ಗ್ರಾಮದ 14 ರೈತರು ಹಾಗೂ ಮಗ್ರಾಲ್ ಗ್ರಾಮದ 20 ರೈತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ಎಂಟು ಮಂದಿಯನ್ನು ಬಂಧಿಸಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ಪ್ರದೇಶದಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.