ಕೋಟೇಶ್ವರ: ಉದ್ಯೋಗ ಮೇಳದಲ್ಲಿ 238 ಮಂದಿ ಆಯ್ಕೆ
ಕುಂದಾಪುರ, ಡಿ.30: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲೇಜುಗಳು ಕೇವಲ ಪದವಿಗಳನ್ನು ಮಾತ್ರ ಕೊಟ್ಟರೆ, ಶಿಕ್ಷಣ ಒಂದು ಅಪೂರ್ಣ ವ್ಯವಸ್ಥೆಯಾಗುತ್ತದೆ. ಬದಲಾಗಿ ಪದವಿ ಜೊತೆಯಲ್ಲಿ ಉದ್ಯೋಗದ ಅವಕಾಶವನ್ನು ಕಲ್ಪಿಸಿಕೊಟ್ಟಾಗ ಮಾತ್ರ ಒಂದು ಪರಿಪೂರ್ಣವಾದ ಶಿಕ್ಷಣ ಸಂಸ್ಥೆ ರೂಪುಗೊಳ್ಳುತ್ತದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಉಡುಪಿ ಜಿಲ್ಲೆ ಸರ್ಕಾರಿ ಪದವಿ ಕಾಲೇಜುಗಳ ಲೀಡ್ ಪ್ರಾಂಶುಪಾಲರಾದ ಬಾಲಕೃಷ್ಣ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಕೋಟೇಶ್ವರದ ಶ್ರಿ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಮಯ ಕೇಂದ್ರ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಉದ್ಯೋಗ ಮೇಳದಲ್ಲಿ ಉಡುಪಿ ಜಿಲ್ಲೆಯ ಪದವಿ ಕಾಲೇಜಿನ 609 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ರಾಜ್ಯದ 11 ಪ್ರತಿಷ್ಟಿತ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು 238 ಮಂದಿ ಉದ್ಯೋಗಾಕಾಂಕ್ಷಿ ಗಳನ್ನು ಆಯ್ಕೆ ಮಾಡಿಕೊಂಡರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಉದ್ಯಮಿಗಳಾದ ಜಯಪ್ರಕಾಶ ಶೆಟ್ಟಿ, ಜಿಲ್ಲಾ ಉದ್ಯೋಾಧಿಕಾರಿ ಖಲಂದರ್ ಖಾನ್ ಮಾತಾಡಿದರು. ಆಪ್ತ ಸಲಹೆಗಾರರು ಮತ್ತು ತರಬೇತುದಾರ ಶ್ರೀಜಗತ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಉಷಾದೇವಿ ಜೆ.ಎಸ್, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ಗಣೇಶ್ ಪೈ ಎಂ. ಉಪಸ್ಥಿತರಿದ್ದರು.
ಉದ್ಯೋಗ ಮಾರ್ಗದರ್ಶನ ಹಾಗೂ ಸ್ಥಾನೀಕರಣ ಘಟಕದ ಪದವಿ ವಿಭಾಗದ ಸಂಚಾಲಕ ಸುಬ್ರಮಣ್ಯ ಎ. ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಸಂಚಾಲಕ ಸಂತೋಷ ನಾಯ್ಕ ಹೆಚ್. ವಂದಿಸಿದರು. ಶಗುಪಾ ತರನಂ ಕಾರ್ಯಕ್ರಮ ನಿರ್ವಹಿಸಿದರು.