ವಲಸೆ ಕಾರ್ಮಿಕರಿಗೆ ಪ್ರತ್ಯೇಕ ಆಹಾರ ನೀತಿಗೆ ಪ್ರಸ್ತಾವನೆ: ಅಧಿಕಾರಿಗಳಿಗೆ ಸಚಿವ ಪ್ರಮೋದ್ ಸೂಚನೆ
ಉಡುಪಿ, ಡಿ.30: ವಲಸೆ ಕಾರ್ಮಿಕರಿಗೆ ಪ್ರತ್ಯೇಕ ಆಹಾರ ನೀತಿಯನ್ನು ರೂಪಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ವಲಸೆ ಕಾರ್ಮಿಕರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿ ದ್ದರು. ವಲಸೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ತಹಶೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳು ಪ್ರಗತಿನಗರ, ಬೀಡಿನಗುಡ್ಡೆ, ಹಾರಾಡಿ ಮುಂತಾದ ಕಡೆಗಳಲ್ಲಿ ಕ್ಯಾಂಪ್‌ಗಳನ್ನು ಹಾಕಿ ಕ್ರಮ ಕೈಗೊಳ್ಳಬೇಕು ಎಂದರು.
ಅನ್ನಭಾಗ್ಯದಂತಹ ಯೋಜನೆ ವಲಸಿಗರಿಗೆ ನೆರವಾಗಬೇಕು. ಇವರಿಗೆ ಪಡಿತರ ಪೂರೈಕೆ ಸರಳವಾಗಬೇಕೆಂಬ ಉದ್ದೇಶದಿಂದ ಪ್ರಾಯೋಗಿಕವಾಗಿ ಒಂದು ಪಡಿತರ ಅಂಗಡಿಯಲ್ಲಿ ಬಯೋಮೆಟ್ರಿಕ್ ಮೂಲಕ ಆಧಾರ ಕಾರ್ಡ್ ನಂಬರ್‌ನ್ನು ಆಧಾರವಾಗಿರಿಸಿ ಪಡಿತರ ಪಡೆಯಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಸಚಿವರು ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿ ದರು.
ಜಿಲ್ಲೆಯಲ್ಲಿ ನಿವೇಶನಕ್ಕೆ ಜಾಗದ ಕೊರತೆ ಇರುವುದರಿಂದ ವಲಸಿಗರಿಗೆ ಮೂಲಸೌಕರ್ಯ ಒದಗಿಸುವುದು ಸವಾಲಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯ ನೈಟ್ ಶಲ್ಟರ್‌ನ್ನು ತಾತ್ಕಾಲಿಕ ವಾಸ ಯೋಗ್ಯವಾಗಿಸಲು ನಮ್ಮ ಭೂಮಿ ಸರಕಾರೇತರ ಸಂಸ್ಥೆಗೆ ನೀಡಿ ನಡೆಸುವ ಬಗ್ಗೆ ಅವಕಾಶವಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಇಂಜಿನಿಯರ್‌ಗೆ ಸಚಿವರು ಹೇಳಿದರು.
ಹಾರಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಒದಗಿಸಲು ಶೀಘ್ರವೇ ಬೋರ್‌ವೆಲ್ ಕೊರೆಯಲು ಹಾಗೂ ಶೌಚಾಲಯ ನಿರ್ಮಿಸಲು ಕ್ರಮಕೈಗೊಳ್ಳ ಬೇಕು. ಬೀದಿದೀಪಕ್ಕೆ ತಕ್ಷಣ ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಪ್ರಗತಿ ನಗರದಲ್ಲಿನ ಶಾಲೆಗೆ ಮಕ್ಕಳು ತೆರಳಲು ಅನುಕೂಲವಾಗುವಂತೆ ನರ್ಮ್ ಬಸ್ ರೂಟ್‌ನ್ನು ಪ್ರಗತಿ ನಗರದವರೆಗೆ ವಿಸ್ತರಿಸಲು ಸೂಚಿಸಿದ ಸಚಿವರು, ಮುಖ್ಯಮಂತ್ರಿಗಳ ಸಾಧನ ಸಂಭ್ರಮದ ದಿನ 94 ಸಿ ಮತ್ತು ಸಿಸಿ ಯಡಿ ಹಕ್ಕುಪತ್ರ ನೀಡಲು ತಹಸೀಲ್ದಾರರಿಗೆ ತಿಳಿಸಿದರು.
ರೇಷನ್ ಕಾರ್ಡ್, ಮತದಾರರ ಚೀಟಿ, ಹಕ್ಕುಪತ್ರ, ಕುಡಿಯುವ ನೀರು, ಸಮುದಾಯ ಶೌಚಾಲಯ ಒದಗಿಸುವ ಬಗ್ಗೆ, ಇಲಾಖೆಯಲ್ಲಿರುವ ಕಲ್ಯಾಣ ನಿಧಿಯ ಸದ್ಬಳಕೆಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಕ್ತ ನಿರ್ದೇಶನ ನೀಡಿದರು.
ವಲಸೆ ಕಾರ್ಮಿಕರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ, ಬಾಲ್ಯವಿವಾಹ ಮಾಡದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದ ಜಿಲ್ಲಾಧಿಕಾರಿಗಳು, ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳು ವುದಾಗಿ ಎಚ್ಚರಿಕೆ ನೀಡಿದರು. ವಲಸೆ ಬಂದಿರುವ ಕಾರ್ಮಿಕರಿಗೆ ಕೌಶಲ್ಯ ಹೆಚ್ಚಿಸಿ ಸ್ವಾವಲಂಬಿಗಳಾಗಿ ಬದುಕಲು ಅಗತ್ಯ ತರಬೇತಿಗಳನ್ನು ನೀಡಲು ಜಿಲ್ಲಾಡಳಿತ ಬದ್ದವಾಗಿದೆ ಎಂದರು.
ಸಭೆಯಲ್ಲಿ ಕುಂದಾಪುರ ಸಹಾಯಕ ಆಯುಕ್ತೆ ಶಿಲ್ಪಾನಾಗ್, ಅಪರ ಜಿಲ್ಲಾ ಧಿಕಾರಿ ಅನುರಾಧ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ, ಕಾರ್ಮಿಕ ಇಲಾಖೆ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.