×
Ad

ಉನ್ನತ ಶಿಕ್ಷಣ ಸವಾಲಿನ ಕ್ಷೇತ್ರ: ಡಾ.ವಿನೋದ್ ಭಟ್

Update: 2017-12-30 20:20 IST

ನಿಟ್ಟೆ, ಡಿ.30: ಉನ್ನತ ಶಿಕ್ಷಣ ಎಂಬುದು ಇಂದು ಸವಾಲಿನ ಕ್ಷೇತ್ರವಾಗಿ ಹೊರಹೊಮ್ಮಿದೆ. ವಿಶ್ವದಾದ್ಯಂತ ಇಂದು ಉನ್ನತ ಶಿಕ್ಷಣಕ್ಕೆ ಬರುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬರುತ್ತಿದೆ. ಇದರಲ್ಲಿ ಉತ್ತಮ ಆಡಳಿತ ನಿರ್ವಹಣೆಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತದೆ. ಪ್ರತಿ ಕ್ಷೇತ್ರದಲ್ಲೂ ಉತ್ತಮ ಆಡಳಿತ ಎಂಬುದು ಕಷ್ಟದಾಯಕವಾಗುತ್ತಿದೆ. ಇದಕ್ಕೆ ದೃಢಸಂಕಲ್ಪ, ಉತ್ತಮ ಸಹಕಾರ ಹಾಗೂ ಅತ್ಯುತ್ಸಾಹದ ಅಗತ್ಯವಿದೆ ಎಂದು ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ನ ಕುಲಪತಿ ಡಾ.ವಿನೋದ್ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವತಿಯಿಂದ ಆಯೋಜಿಸಲಾದ ‘ಭಾರತದ ಉನ್ನತ ಶಿಕ್ಷಣದಲ್ಲಿ ಆಡಳಿತ ನಿರ್ವಹಣೆ’ ಎಂಬ ವಿಷಯದ ಕುರಿತ ಎರಡು ದಿನಗಳ ಏಳನೇ ರಾಷ್ಟ್ರೀಯ ವಿಚಾರಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉನ್ನತ ಶಿಕ್ಷಣಕ್ಕೆ ದೇಶದಲ್ಲಿ ಒಳ್ಳೆಯ ಉತ್ತೇಜನ ಸಿಗುತ್ತಿದೆ. ಆದರೆ ಅದಕ್ಕೆ ಪೂರಕವಾಗಿ ಈ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಲೇ ಇಲ್ಲ ಎಂದು ಡಾ.ಭಟ್, ಬ್ರಿಟಿಷರು ಒಳ್ಳೆಯ ವ್ಯವಸ್ಥೆಯೊಂದನ್ನು ನಮಗೆ ಬಿಟ್ಟುಹೋಗಿದ್ದರು. ಅರ್ಹರಾದವರು ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡರೆ ಪರಿಣಾಮಕಾರಿ ವ್ಯವಸ್ಥೆ ಒಳ್ಳೆಯ ಆಡಳಿತವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎನ್.ಕೆ.ತಿಂಗಳಾಯ ಮಾತನಾಡಿ, ನಮಗಿಂದು ಉತ್ತಮ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿ, ಇಂದಿನ ಸವಾಲನ್ನು ಯುವಜನತೆ ಎದುರಿಸುವುದಕ್ಕೆ ಸಜ್ಜುಗೊಳಿಸುವಂತ ಶಿಕ್ಷಣವನ್ನು ನೀಡುವುದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಕರೆ ನೀಡಿದರು.

ಸಂಸ್ಥೆಯ ನಿರ್ದೇಶಕ ಡಾ.ಕೆ. ಸಂಕರನ್ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರೊ. ಕಾರ್ತಿಕ್ ಕುದ್ರೋಳಿ ವಿಚಾರಸಂಕಿರಣದ ಕುರಿತು ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ವಿಚಾರಸಂಕಿರಣದ ಸಂಚಾಲಕಿ ಡಾ.ಆಶಾಲತಾ ಕೆ. ವಂದಿಸಿದರೆ, ಶ್ವೇತಾ ಸಾಹೂ ಹಾಗೂ ನಿತಿನ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News