×
Ad

ಹೊಸ ವರ್ಷ ಆಚರಣೆ: ಬಜರಂಗ ದಳ ಮನವಿ

Update: 2017-12-30 20:55 IST

ಉಡುಪಿ, ಡಿ.30: ಹೊಸ ವರ್ಷದ ಹೆಸರಿನಲ್ಲಿ ಡಿ.31ರಂದು ನಡೆಯುವ ಡಿಜೆ ಪಾರ್ಟಿ, ಅಶ್ಲೀಲ ನೃತ್ಯಗಳಂತಹ ಕಾರ್ಯಕ್ರಮಗಳಿಗೆ ಬಜರಂಗದಳ ವಿರೋಧ ವ್ಯಕ್ತಪಡಿಸಿದ್ದು, ಇಂಥ ಯಾವುದೇ ಕಾರ್ಯಕ್ರಮಗಳಿಗೂ ಅನುಮತಿ ನೀಡಬಾರದು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ಪೋಲಿಸ್ ಇಲಾಖೆಯೇ ಹೊಣೆಯಾಗಿರುತ್ತದೆ ಎಂದು ಬಜರಂಗದಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

ಹೊಸ ವರ್ಷದ ಹೆಸರಿನಲ್ಲಿ ಡಿ.31ರಂದು ರಾತ್ರಿ ನಗರದ ಹಲವು ಹೊಟೇಲ್ ಪಬ್ ಹಾಗೂ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಪಾರ್ಟಿ,ಅಶ್ಲೀಲ ನೃತ್ಯ, ಮಾದಕ ದ್ರವ್ಯಗಳ ಪಾನ, ಪಾರ್ಟಿಗಳನ್ನು ಅಯೋಜನೆ ಮಾಡಲಾಗುತ್ತಿದೆ. ಹೊಸ ವರುಷದ ಹೆಸರಿನಲ್ಲಿ ನಡೆಯುವ ಪಾರ್ಟಿಗಳು ಪಾಶ್ಚಾತ್ಯ ಸಂಸ್ಕ್ರತಿಯಿಂದ ಕೂಡಿದ್ದು ಇದನ್ನು ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳ ವಿರೋಧಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆದ್ದರಿಂದ ಯಾವುದೇ ಹೋಟೆಲ್‌ಗಳಲ್ಲಿ ಹೊಸ ವರ್ಷದ ಪ್ರಯುಕ್ತ ನಡೆಯುವ ಡಿಜೆ ಪಾರ್ಟಿ, ಅಶ್ಲೀಲ ನೃತ್ಯಗಳಿಗೆ ಅನುಮತಿ ನೀಡಬಾರದು ಮತ್ತು ಎಲ್ಲಾ ಬಾರ್, ಹೋಟೆಲ್‌ಗಳನ್ನು ರಾತ್ರಿ 11ರ ಒಳಗೆ ಮುಚ್ಚಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಬಜರಂಗ ದಳದ ಮಂಗಳೂರು ವಿಭಾಗ ಸಂಚಾಲಕ ಸುನೀಲ್ ಕೆ.ಅರ್, ಉಡುಪಿ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಹಿಪ ಜಿಲ್ಲಾ ಕಾರ್ಯದರ್ಶಿ ರತ್ನಾಕರ್ ಅಮೀನ್, ಜಿಲಾ ಸೇವಾ ಪ್ರಮುಖ ಸುಧೀರ್ ನಿಟ್ಟೆ, ಜಿಲ್ಲಾ ಗೋರಕ್ಷಾ ಪ್ರಮುಖ ದಿನೇಶ್ ಹೆಬ್ರಿ, ಜಿಲ್ಲಾ ದುರ್ಗಾವಾಹಿನಿ ಸಂಚಾಲಕಿ ರಮಾ ಜೆ ರಾವ್, ನಗರ ಸಂಚಾಲಕಿ ಭಾಗ್ಯಶ್ರೀ ಐತಾಳ್, ಸುದೀರ್ ಕಾಪು, ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News