×
Ad

ಗುಜರಾತ್: ಸರಕಾರಕ್ಕೆ 3 ದಿನದ ಗಡುವು ನೀಡಿದ ಡಿಸಿಎಂ ನಿತಿನ್ ಪಟೇಲ್

Update: 2017-12-30 21:53 IST

ಅಹ್ಮದಾಬಾದ್, ಡಿ.30: 3 ದಿನದ ಹಿಂದೆಯಷ್ಟೇ ಗುಜರಾತ್‌ನಲ್ಲಿ ಅಧಿಕಾರ ವಹಿಸಿಕೊಂಡ ವಿಜಯ್ ರೂಪಾನಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಇದೀಗ ಸಂಕಷ್ಟ ಎದುರಾಗಿದ್ದು ಸಚಿವ ಸಂಪುಟದಲ್ಲಿ ತನಗೆ ನೀಡಲಾಗಿರುವ ಖಾತೆಯ ಬಗ್ಗೆ ಅಸಮಾಧಾನ ಹೊಂದಿರುವ ಉಪಮುಖ್ಯಮಂತ್ರಿ ನಿತಿನ್ ಪಟೇಲ್ 3 ದಿನದ ಒಳಗೆ ತಮಗೆ ಮಹತ್ವದ ಖಾತೆ ನೀಡದಿದ್ದರೆ ಸಚಿವ ಸ್ಥಾನ ತ್ಯಜಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ಸಂದರ್ಭ, ನಿತಿನ್ ಪಟೇಲ್‌ಗೆ ಬೆಂಬಲ ಸೂಚಿಸಿರುವ ಪಟಿದಾರ್ ಸಂಘಟನೆಯಾದ ಸರ್ದಾರ್ ಪಟೇಲ್ ತಂಡವು, ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಸೋಮವಾರ ಮೋದಿ ತವರೂರು ಮೆಹ್ಸಾನದಲ್ಲಿ ಬಂದ್ ಆಚರಿಸಲು ಕರೆ ನೀಡಿದೆ.

 ಈ ಹಿಂದಿನ ಸರಕಾರದಲ್ಲಿ ಪಟೇಲ್ ಪ್ರಮುಖವಾದ ವಿತ್ತ ಖಾತೆಯ ಜೊತೆಗೆ ಗ್ರಾಮೀಣಾಭಿವೃದ್ಧಿ ಖಾತೆಯನ್ನೂ ನಿರ್ವಹಿಸುತ್ತಿದ್ದರು. ಆದರೆ ಈ ಬಾರಿಯ ಸಚಿವ ಸಂಪುಟದಲ್ಲಿ ಅವರಿಗೆ ಅಷ್ಟೇನೂ ಮಹತ್ವವಿಲ್ಲದ ರಸ್ತೆ ಮತ್ತು ಕಟ್ಟಡ ಖಾತೆಯ ಜೊತೆಗೆ ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಯ ನಿರ್ವಹಣೆಯನ್ನು ವಹಿಸಲಾಗಿದೆ. ಆದರೆ ಪಟೇಲ್‌ಗೆ ವಿತ್ತ ಖಾತೆಯನ್ನು ಮತ್ತೊಬ್ಬರಿಗೆ ವಹಿಸಿರುವ ಕುರಿತು ಅಸಮಾಧಾನವಿದ್ದು ಪಕ್ಷದ ಮುಖಂಡರಿಗೆ ತಮ್ಮ ಅಸಮಾಧಾನವನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಪಟೇಲ್ ಅಧಿಕಾರ ವಹಿಸಿಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ಅಲ್ಲದೆ ಶುಕ್ರವಾರ ತಮಗೆ ಶುಭಾಶಯ ಸಲ್ಲಿಸಲು ಬಂದವರನ್ನು ಮನೆಯಲ್ಲಿಯೇ ಭೇಟಿ ಮಾಡಿದ್ದ ಪಟೇಲ್, ಪಕ್ಷದ ಹಿರಿಯ ನಾಯಕಿ ಆನಂದಿಬೆನ್ ಪಟೇಲ್‌ರೊಂದಿಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ತನ್ನ ಭಾವನೆಗಳನ್ನು ಪಕ್ಷದ ಹೈಕಮಾಂಡ್‌ಗೆ ಮುಟ್ಟಿಸುವಂತೆ ಆನಂದಿಬೆನ್‌ಗೆ ತಿಳಿಸಿದ ಪಟೇಲ್, ಮೂರು ದಿನದೊಳಗೆ ತನಗಾಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಸಚಿವ ಹುದ್ದೆ ತ್ಯಜಿಸುವುದಾಗಿ ಎಚ್ಚರಿಸಿದ್ದಾರೆ. ತಾಳ್ಮೆ, ಸಹನೆ ಕಾಯ್ದುಕೊಳ್ಳುವಂತೆ ಆನಂದಿಬೆನ್ ಸಲಹೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಗುರುವಾರ ಖಾತೆಗಳನ್ನು ಹಂಚಿದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಗೈರುಹಾಜರಾಗಿದ್ದರು.

 ಆದರೆ ಪಟೇಲ್‌ಗೆ ಅಸಮಾಧಾನವಿದೆ ಎಂಬ ವರದಿಯನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ತಳ್ಳಿಹಾಕಿದ್ದಾರೆ. ವಿತ್ತ ಖಾತೆಯನ್ನು ನಿರ್ವಹಿಸುವ ಸಚಿವರು ಸಂಪುಟದಲ್ಲಿ ಎರಡನೇ ಸ್ಥಾನದಲ್ಲಿರುತ್ತಾರೆ ಎಂಬುದು ಸರಿಯಲ್ಲ. ನಿತಿನ್ ಪಟೇಲ್ ನಮ್ಮ ಹಿರಿಯರಾಗಿದ್ದು ಎರಡನೇ ಸ್ಥಾನದಲ್ಲಿ ಅವರೇ ಮುಂದುವರಿಯುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪಟಿದಾರ್ ಮುಖಂಡರ ಬೆಂಬಲ

ಶನಿವಾರ ನಿತಿನ್ ಪಟೇಲ್‌ರನ್ನು ಭೇಟಿಮಾಡಿದ ಉತ್ತರ ಗುಜರಾತ್‌ನ ಪಟಿದಾರ್ ಮುಖಂಡರು ಉಪಮುಖ್ಯಮಂತ್ರಿಗೆ ಬೆಂಬಲ ಸೂಚಿಸಿದ್ದಾರೆ . ಸರಕಾರದಲ್ಲಿರುವ ಹಿರಿಯ ಪಟಿದಾರ್ ಮುಖಂಡ ನಿತಿನ್ ಪಟೇಲ್‌ಗೆ ಅನ್ಯಾಯವಾಗಿರುವುದು ಸ್ಪಷ್ಟವಾಗಿದೆ. ನಾವು ಅವರ ಜೊತೆಗಿದ್ದು ಬೆಂಬಲಿಸುತ್ತೇವೆ ಎಂದು ಮೆಹ್ಸಾನದ ಕೀರ್ತಿ ಪಟೇಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಪಟಿದಾರ್ ಸಮುದಾಯವು ನಿತಿನ್ ಪಟೇಲ್ ಜೊತೆಗಿದೆ. ಈ ಹಿಂದಿನ ಸರಕಾರದಲ್ಲಿ ಪಟೇಲ್ ನಿರ್ವಹಿಸುತ್ತಿದ್ದ ಖಾತೆಗಳನ್ನು ಅವರಿಂದ ಕಿತ್ತುಕೊಂಡು ಅನ್ಯಾಯ ಎಸಗಲಾಗಿದೆ. ಇದು ಖಂಡನೀಯ ಎಂದು ಸರ್ದಾರ್ ಪಟೇಲ್ ತಂಡದ ಮುಖಂಡ ಪೂರ್ವಿನ್ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News