×
Ad

ಜ.6ರಂದು ಹಡಗು ಮಾದರಿಯ ಕಲ್ಮಾಡಿ ಚರ್ಚ್ ಉದ್ಘಾಟನೆ

Update: 2017-12-30 22:00 IST

ಉಡುಪಿ, ಡಿ.30: ನೂತನವಾಗಿ ನಿರ್ಮಿಸಲ್ಪಟ್ಟ ಹಡಗು ಮಾದರಿಯ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ ಜ. 6ರಂದು ಉದ್ಘಾಟನೆಗೊಳ್ಳಲಿದೆ ಎಂದು ಚರ್ಚ್‌ನ ಧರ್ಮಗುರು ಫಾ.ಅಲ್ಬನ್ ಡಿಸೋಜ ತಿಳಿಸಿದ್ದಾರೆ.

ಚರ್ಚ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 6 ಕೋಟಿ ರೂ. ಯೋಜನೆಯಡಿಯಲ್ಲಿ ನಿರ್ಮಿಸಿರುವ ರಾಜ್ಯದ ಮೊದಲನೆಯ ಹಡಗಿನಾಕಾರದ ಚರ್ಚ್ ಆಗಿದ್ದು, ಒಟ್ಟು ವಿಸ್ತೀರ್ಣ 10,000 ಚ.ಮೀ. ಹೊಂದಿರುವ ಈ ಚರ್ಚ್‌ನಲ್ಲಿ ಏಕಕಾಲದಲ್ಲಿ ಒಟ್ಟು 800 ಮಂದಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಕಾಪು ಲೈಟ್ಹೌಸ್ ಮಾದರಿಯ ಗಂಟೆ ಗೋಪುರ ಮತ್ತು ಧರ್ಮಗುರುಗಳ ನಿವಾಸಗಳನ್ನು ನಿರ್ಮಿಸಲಾಗಿದೆ ಎಂದರು.

ನೂತನ ಚರ್ಚಿನ ಉದ್ಘ್ಘಾಟನೆ ಪ್ರಯುಕ್ತ ಜ. 3ರಂದು ಮಧ್ಯಾಹ್ನ 2-30ಕ್ಕೆ ಹೊರೆ ಕಾಣಿಕೆ ಸಮರ್ಪಣಾ ಮೆರವಣಿಗೆಯು ಮಲ್ಪೆಬಸ್ ನಿಲ್ದಾಣದಿಂದ ಚರ್ಚ್‌ವರೆಗೆ ನಡೆಯಲಿದೆ. ಮೆರವಣಿಗೆಗೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಲಿರುವರು. ಸಂಜೆ 4:30ಕ್ಕೆ ಚರ್ಚ್‌ನ ಆವರಣದಲ್ಲಿ ಜರಗುವ ಅಂತರ್ ಧರ್ಮೀಯ ಸೌಹಾರ್ದ ಕೂಟದ ಅಧ್ಯಕ್ಷತೆಯನ್ನು ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸಲಿರುವರು. ಬಾರಕೂರು ಮಹಾ ಸಂಸ್ಥಾನದ ಮಠಾಧೀಶ ಶ್ರೀಡಾ.ಸಂತೋಷ ಭಾರತಿ ಸ್ವಾಮೀಜಿ, ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಭಾಗವಹಿಸಲಿರುವರು.

ಜ.6ರಂದು ಬೆಳಗ್ಗೆ ಬೆಳಿಗ್ಗೆ 9ಗಂಟೆಗೆ ನೂತನ ಚರ್ಚಿನ ಉದ್ಘಾಟನೆ, ಆಶೀರ್ವಚನ, ಪ್ರಾರ್ಥನಾ ವಿಧಿ ವಿಧಾನಗಳು ನಡೆಯಲಿದ್ದು, ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಬಿಷಪ್ ಡಾ. ಅಲೋಶಿ ಯಸ್ ಪೌಲ್ ಡಿಸೋಜ, ಶಿವಮೊಗ್ಗ ಬಿಷಪ್ ಡಾ.ಫ್ರಾನ್ಸಿಸ್ ಸೆರಾವೋ, ಗುಲ್ಬರ್ಗ ಬಿಷಪ್ ಡಾ.ರಾಬರ್ಟ್ ಮಿರಾಂಡಾ ಕೃತಜ್ಞತಾ ದಿವ್ಯ ಬಲಿಪೂಜೆ ಯನ್ನು ಅರ್ಪಿಸಲಿರುವರು. ಬಳಿಕ 11:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5:30ಕ್ಕೆ ವಿಲ್ಫಿ ನೈಟ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ, ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸ, ಕಟ್ಟಡ ಸಮಿತಿಯ ಲೂವಿಸ್ ಲೋಬೊ, ಸಂದೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News