ಖ್ಯಾತ ವೈದ್ಯ ಡಾ.ಶಾಂತಾರಾಮ ಶೆಟ್ಟಿಯವರಿಗೆ ಕರಾವಳಿ ಉತ್ಸವ ಗೌರವ ಪ್ರಶಸ್ತಿ
ಮಂಗಳೂರು, ಡಿ.30: ಈ ಬಾರಿಯ ಕರಾವಳಿ ಉತ್ಸವದಲ್ಲಿ ಗೌರವ ಪ್ರಶಸ್ತಿಯನ್ನು ಖ್ಯಾತ ವೈದ್ಯರಾದ ಡಾ. ಶಾಂತರಾಮ ಶೆಟ್ಟಿಯವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕರಾವಳಿ ಉತ್ಸವ ಸಮಿತಿ ಪ್ರಕಟಿಸಿದೆ.
ಡಿಸೆಂಬರ್ 31ರಂದು ಪಣಂಬೂರಿನಲ್ಲಿ ನಡೆಯುವ ಕರಾವಳಿ ಉತ್ಸವ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಂದಾಪುರದ ಗ್ರಾಮೀಣ ಪ್ರದೇಶದ ವಿಶಾಲಾಕ್ಷಿ ಮತ್ತು ತೇಜಪ್ಪ ಶೆಟ್ಟಿಯೆಂಬ ಅನಕ್ಷರಸ್ಥ ದಂಪತಿಗಳ ಪುತ್ರ ಡಾ.ಶಾಂತಾರಾಮ ಶೆಟ್ಟಿಯವರು ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದ ಬಳಿ ದೆಹಲಿಯ ಮೌಲನಾ ಅಝಾದ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಎಸ್ ಆರ್ಥೊ ಸ್ನಾತಕೋತ್ತರ ಪದವಿಯನ್ನು ಪಡೆದು ಅಮೇರಿಕಾ, ಇಂಗ್ಲೇಂಡ್‌ನಲ್ಲಿ ಎಲುಬು ತಜ್ಞರಾಗಿ ಇಂಗ್ಲೇಡ್‌ನ ಎಫ್‌ಆರ್‌ಸಿಎಸ್ ಸಂಸ್ಥೆಯಿಂದ ಅತ್ಯುತ್ತಮ ಮೂಳೆ ತಜ್ಞರೆಂಬ ಪ್ರಶಸ್ತಿ ಪಡೆದಿದ್ದಾರೆ.
ಕರಾವಳಿ ಕೆ.ಎಂ.ಸಿ ಯ ವೈದ್ಯಕೀಯ ಶಿಕ್ಷಣ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ, 2007ರಿಂದ 2011ರವರೆಗೆ ನಿಟ್ಟೆ ವಿಶ್ವ ವಿದ್ಯಾನಿಲಯದ ಪ್ರಥಮ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಕರಾವಳಿಯ ಖ್ಯಾತ ಮೂಳೆ ತಜ್ಞರಾಗಿ ಕಾರ್ಯನಿರ್ವ ಹಿಸುತ್ತಿರುವ ಡಾ.ಶಾಂತಾರಾಮ ಶೆಟ್ಟಿಯವರು ಭಾರತೀಯ ಮೂಳೆ ತಜ್ಞರ ಕೇಂದ್ರದ ಅಧ್ಯಕ್ಷರಾಗಿದ್ದಾರೆ.
ಯುಎಸ್‌ಎ, ಯು.ಕೆ., ಜರ್ಮನ್‌ನ ಸಂದರ್ಶಕ ಪ್ರಾಧ್ಯಾಪಕರಾಗಿ 150ಕ್ಕೂ ಅಧಿಕ ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ 45ಕ್ಕೂ ಅಧಿಕ ಉಪನ್ಯಾಸ ನೀಡಿ.
ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸೇರಿ ಸಾವಿರಾರು ಜನರಿಗೆ ಉಚಿತ ವೈದ್ಯಕೀಯ ಸೇವೆಯನ್ನು ನೀಡಿದ ಖ್ಯಾತ ವೈದ್ಯರಾದ ಶಾಂತರಾಮ ಶೆಟ್ಟಿಯವರನ್ನು ಈ ಬಾರಿಯ ಕರಾವಳಿ ಉತ್ಸವದಲ್ಲಿ ಗೌರವ ಪ್ರಶಸ್ತಿಯನ್ನು ನೀಡಲು ಕರಾವಳಿ ಉತ್ಸವ ಸಮಿತಿ ಆಯ್ಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.