×
Ad

ಸಚಿವರು ಭಾಷಣಗಳಲ್ಲೇ ಅಲ್ಪಸಂಖ್ಯಾತರನ್ನು ಓಲೈಸುವ ಹೇಳಿಕೆ ನೀಡುತ್ತಿದ್ದಾರೆ: ಸಂಸದ ನಳಿನ್

Update: 2017-12-30 22:25 IST

ಬಂಟ್ವಾಳ, ಡಿ. 30: ಸಚಿವರು ಭಾಷಣಗಳಲ್ಲೇ ಅಲ್ಪಸಂಖ್ಯಾತರನ್ನು ಓಲೈಸುವ ಹೇಳಿಕೆ ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು ಬಳಸಿ ಅಲ್ಪಸಂಖ್ಯಾತರ ಋಣ ತೀರಿಸುವ ಕಾರ್ಯವನ್ನು ಮಾಡುತ್ತಿರುವ ಉಸ್ತುವಾರಿ ಸಚಿವರು, ಹಿಂದೂ ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರತ್ನಾಕರ ಶೆಟ್ಟಿ ಗಡೀಪಾರು ಆದೇಶದ ಹಿಂದೆ ರಾಜಕೀಯ ಕುಮ್ಮಕ್ಕು ಅಡಗಿದೆ. ಆತ ಅಪರಾಧಿ ಎಂದಾದರೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು. ಕೇಸ್ ಇರುವ ಹಲವಾರು ಮಂದಿ ತಾಲೂಕಿನಲ್ಲಿದ್ದಾರೆ. ಅವರನ್ನು ಗಡೀಪಾರ ಮಾಡಲಾಗುತ್ತದೆಯೇ? ಎಂದು ನಳಿನ್ ಪ್ರಶ್ನಿಸಿದರು.

ಚುನಾವಣೆಗೆ ಆರು ತಿಂಗಳು ಇರುವ ಹಿನ್ನೆಲೆಯಲ್ಲಿ ಹಿಂದುಪರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್, ಬೆದರಿಕೆ, ಸುಳ್ಳು ಕೇಸ್ ಮೂಲಕ ಬಂಧನ, ಅಮಾಯಕ ಕಾರ್ಯಕರ್ತರ ಮೇಲೆ ಸುಳ್ಳು ಕಾರಣ ಹೇಳಿ ದೂರು ನೀಡುವ ಕೆಲಸವಾಗುತ್ತಿದೆ. ಚುನಾವಣೆ ಸಂದರ್ಭ ಕಾರ್ಯಕರ್ತರ ಸ್ಥೈರ್ಯ ಅಡಗಿಸುವ ಯತ್ನವಿದು ಎಂದು ಆಪಾದಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದ ಅವರು, ಕೇರಳ ಕಮ್ಯೂನಿಷ್ಟರಿಗಿಂತಲೂ ಹೆಚ್ಚಿನ ರಾಜಕಾರಣ ದ.ಕ.ಜಿಲ್ಲೆಯಲ್ಲಿ ಆರಂಭಗೊಂಡಿದೆ. ಬಹುಸಂಖ್ಯಾತರ ಮೇಲೆ ಕೇಸು ಹಾಕುವುದು, ಅಲ್ಪಸಂಖ್ಯಾತರ ಋಣ ತೀರಿಸುವ ಮಾತನಾಡುವುದು ಇದರ ಒಂದು ಭಾಗ. ಕಾಂಗ್ರೆಸ್‌ಗೆ ಸೋಲಿನ ಭೀತಿ ಎದುರಾಗಿದೆ. ಮುಂದೆ ಹಿಂದೂ ಸಮಾಜ ಇವುಗಳ ವಿರುದ್ಧ ಬೀದಿಗಿಳಿದರೆ ಎಲ್ಲ ಅನಾಹುತಗಳಿಗೆ ಸರಕಾರವೇ ಹೊಣೆಯಾಗುತ್ತದೆ ಎಂದು ನಳಿನ್ ಎಚ್ಚರಿಸಿದರು.

ಪುತ್ತೂರು ತಾಲೂಕಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರು, ಮುಖಂಡರ ಮೇಲೆ ಪೊಲೀಸರಿಂದಲೇ ಹಲ್ಲೆ ನಡೆದಿದೆ ಎಂದು ಆಪಾದಿಸಿದ ಅವರು, ಕಲ್ಲಡ್ಕದ ರತ್ನಾಕರ ಶೆಟ್ಟಿ ಅವರನ್ನು ಗಡೀಪಾರು ಮಾಡಲು ಯಾವ ಗುರುತರ ಪ್ರಕರಣವಿದೆ ಎಂದು ಪ್ರಶ್ನಿಸಿದರು.

ಮೂರು ದಿನಗಳ ಹಿಂದೆ ಕಲ್ಲಡ್ಕದಲ್ಲಿ ವೀರಕಂಭದ ಕೇಶವ ಎಂಬವರ ಮೇಲೆ ಹಲ್ಲೆಯಾಗಿದೆ. ಇನ್ನೂ ಆರೋಪಿಗಳ ಪತ್ತೆಹಚ್ಚುವ ಕೆಲಸವಾಗಿಲ್ಲ. ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸಬೇಕು. ಪತ್ತೆಯಾಗದ ಹಲವು ಕೊಲೆ ಕೇಸು, ಅಪರಾಧಗಳು ದಾಖಲಾಗಿವೆ. ಇವೆಲ್ಲದರ ಹಿಂದೆ ಡ್ರಗ್ ಮಾಫಿಯಾ ಕೆಲಸ ಮಾಡಿದೆ. ಅವರನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಸುಲೋಚನಾ ಜಿ.ಕೆ.ಭಟ್, ಜಿ.ಆನಂದ, ಬಿ.ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ವಜ್ರನಾಥ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News