×
Ad

ಸರ್ವ ಧರ್ಮ ಸಮನ್ವಯತೆ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ: ಕುಕ್ಕುವಳ್ಳಿ

Update: 2017-12-30 22:27 IST

ಪುತ್ತೂರು, ಡಿ. 30: ನಮ್ಮ ದೇಶ ಸರ್ವ ಧರ್ಮ ಸಮನ್ವಯತೆ ಸಾರಿದ ದೇಶ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಗುರು ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು.

ಅವರು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಿಡ್ಪಳ್ಳಿ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.29 ರಂದು ಇಗರ್ಜಿ ಹಾಗೂ ಭಾರತೀಯ ಕಥೋಲಿಕ ಯುವ ಸಂಚಲನ ಸಮಿತಿಯ ಸಹಭಾಗಿತ್ವದಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಸಂಗಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ದೇವರ ಆದರ್ಶಗಳನ್ನು ಮೈಗೂಡಿಸಿಕೊಂಡು ಇತರರನ್ನು ಸೋದರ ಸೋದರಿಯರಂತೆ ಕಂಡು ಸೌಹಾರ್ದತೆಯಿಂದ ಬದುಕನ್ನು ಕಟ್ಟುವ ಕೆಲಸ ವಾಗಬೇಕಾಗಿದೆ ಎಂದರು.

ಪಂಚಾಯತ್‌ರಾಜ್ ರಾಜ್ಯ ತರಬೇತುದಾರ ಮಹಮ್ಮದ್ ಬಡಗನ್ನೂರು ಮಾತನಾಡಿ ಪ್ರೀತಿ ವಿಶ್ವಾಸ ಸಹೋದರತಾ ಮನೋಭಾವ ಸಾರಿದ, ವೈರಿಗಳಿಗೂ ಒಳ್ಳೆಯದನ್ನು ಬಗೆಯುವ ಧರ್ಮ ಕ್ರೈಸ್ತ ಧರ್ಮ. ಮಾನವೀಯತೆಯ, ವಿಶ್ವ ಬಾತೃತ್ವ ನೀಡಿದ ಒಬ್ಬ ಶ್ರೇಷ್ಠ ದಾರ್ಶನಿಕ, ಮಾನವತಾವಾದಿ ಯೇಸು ಕ್ರಿಸ್ತರು. ಕ್ರೈಸ್ತ ಧರ್ಮ ಎಲ್ಲರನ್ನೂ ಒಗ್ಗೂಡಿಸಿ ಕೊಂಡು ಹೋಗುವ ಒಂದು ಶ್ರೇಷ್ಠ ಧರ್ಮವಾಗಿದ್ದು ಯೇಸುಕ್ರಿಸ್ತರ ಆದರ್ಶ ನಮಗೆ ಅಗತ್ಯವಾಗಿದೆ ಎಂದು ಹೇಳಿದರು.

 ಅಧ್ಯಕ್ಷತೆ ವಹಿಸಿದ್ದ ಇಗರ್ಜಿಯ ಧರ್ಮಗುರು ರೆ. ಫಾ. ಜೋನ್ ಡಿ’ ಸೋಜಾ ಮಾತನಾಡಿ ತುಳು ನಾಡಿನ ಜನರು ಪ್ರೀತಿ ಪ್ರೇಮ, ಸೌಹಾರ್ದತೆಯಿಂದ ಬದುಕುವ ಮೂಲಕ ಜಗತ್ತಿಗೆ ಆದರ್ಶವನ್ನು ನೀಡಿದವರು. ಹಿಂದು, ಕ್ರೈಸ್ತ, ಮುಸ್ಲಿಂ ಎಂಬ ಪಂಗಡ ಇದ್ದರೂ ಎಲ್ಲರಿಗೂ ದೇವರು ಒಬ್ಬನೆ. ಆದುದರಿಂದ ಯಾವುದೇ ಭೇದ ಭಾವ ಇಲ್ಲದೆ ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ಜೀವನ ಸಾಗಿಸುವ ಎಂದು ಹೇಳಿ ಶುಭ ಹಾರೈಸಿದರು.

 ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ, ಸದಸ್ಯ ಬಾಲಚಂದ್ರ ರೈ ಆನಾಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅವಿನಾಶ್ ರೈ , ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಗ್ರೇಸಿ ಕ್ರಾಸ್ತಾ ಉಪಸ್ಥಿತರಿದ್ದರು.

ನ್ಯಾಯವಾದಿ ಗ್ರೆಗೊರಿ ಡಿ’ ಸೋಜಾ ಸ್ವಾಗತಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಅಶೋಕ್ ಪೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಸಿವೈಎಂ ಸಮಿತಿ ಸದಸ್ಯ ನವೀನ್ ರೊಡ್ರೀಗಸ್ ವಂದಿಸಿದರು. ಕಾಶ್ಮೀರ್ ಡಿ’ ಸೋಜಾ ಪಡುಮಲೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News