×
Ad

ಪಿಕಪ್ ವಿವಾದ: ಕೆಎಸ್ಸಾರ್ಟಿಸಿ ಬಸ್ಸು ಚಾಲಕನಿಗೆ ಹಲ್ಲೆ

Update: 2017-12-30 22:40 IST

ಪುತ್ತೂರು, ಡಿ. 30: ಪ್ರಯಾಣಿಕರನ್ನು ಪಿಕಪ್ ಮಾಡುವ ವಿಚಾರದಲ್ಲಿ ಖಾಸಗಿ ಬಸ್ ಚಾಲಕ ಮತ್ತು ಇತರ ಮೂವರು ಸೇರಿಕೊಂಡು ಕೆಎಸ್ಸಾರ್ಟಿಸಿ ಬಸ್ ಚಾಲಕನೊಬ್ಬನನ್ನು ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆಸಿದ ಘಟನೆ ಪುತ್ತೂರು ನಗರದ ಹೊರವಲಯದ ನೆಹರೂನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದ ಬಸ್ ಚಾಲಕರಾದ ಹೊನ್ನಾವರದ ರಾಮಕೃಷ್ಣ ಶ್ಯಾನ್‌ಭಾಗ್ (35) ಎಂಬವರು ಹಲ್ಲೆಗೊಳಗಾಗಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಪುತ್ತೂರಿಗೆ ರಾಮಕೃಷ್ಣ ಶ್ಯಾನ್‌ಬಾಗ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ಕೆಸ್ಸಾರ್ಟಿಸಿ ಬಸ್ಸನ್ನು ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಕಾಂಟ್ರಕ್ಟ್ ಕ್ಯಾರೇಜ್  ಬಸ್ಸಿನ ಚಾಲಕ ನೆಲ್ಯಾಡಿಯ ಜೋಯ್ ಮತ್ತು ಇತರ ಮೂವರು ಸೇರಿಕೊಂಡು ಬಸ್ಸಿನ ಅವಧಿ ಮತ್ತು ಪ್ರಯಾಣಿಕರನ್ನು ಪಿಕಪ್ ಮಾಡುವ ವಿಚಾರದಲ್ಲಿ ತಗಾದೆ ಎತ್ತಿ ಚಾಲಕನಿಗೆ ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ತಾನು ಸ್ಟೇಟ್ ಬ್ಯಾಂಕಿನಿಂದ ಪುತ್ತೂರಿಗೆ ಕೆಎಸ್ಸಾರ್ಟಿಸಿ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾಂಟ್ರೆಕ್ಟ್ ಕ್ಯಾರೇಜ್ ಬಸ್ಸಿನ ಚಾಲಕ ಪಾಣೆಮಂಗಳೂರಿನಿಂದ ನೆಹರೂನಗರದ ತನಕ ಹಿಂಬಾಲಿಸಿಕೊಂಡು ಬಂದು ನಂತರ ಮುಂದಕ್ಕೆ ಚಲಾಯಿಸಿಕೊಂಡು, ಪದೇ ಪದೇ ಬ್ರೇಕ್ ಹಾಕುತ್ತಾ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಲೇ ಬಂದಿದ್ದ. ನೆಹರೂನಗರ ಪ್ರಯಾಣಿಕರ ಬಸ್ ತಂಗುದಾಣದ ಬಳಿ ತಾನು ಬಸ್ ನಿಲ್ಲಿಸಿ ಪ್ರಯಾಣಿಕರು ಇಳಿಸುತ್ತಿದ್ದ ವೇಳೆ ತಡೆದು ನಿಲ್ಲಿಸಿದ ಅದರ ಚಾಲಕ ಜೋಯ್ ಮತ್ತು ಇತರ ಮೂವರು ಸೇರಿಕೊಂಡು ಬಸ್ಸಿನ ಚಾಲಕ ಸೀಟ್‌ನಲ್ಲಿ ಕುಳಿತಿದ್ದ ತನ್ನ ಸಮವಸ್ತ್ರವನ್ನು ಹರಿದು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮಕೃಷ್ಣ ಶ್ಯಾನ್‌ಭಾಗ್ ಅವರು ಆರೋಪಿಸಿದ್ದಾರೆ.

 ಘಟನೆಯ ಕುರಿತು ರಾಮಕೃಷ್ಣ ಶ್ಯಾನ್‌ಭಾಗ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಚಾಲಕ ಜೋಯ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಯೂನಿಯನ್ ಖಂಡನೆ-ಕ್ರಮಕ್ಕೆ ಆಗ್ರಹ

ಕರ್ತವ್ಯದಲ್ಲಿದ್ದ ಪುತ್ತೂರು ವಿಭಾಗದ ಕೆಎಸ್ಸಾರ್ಟಿಸಿ ಬಸ್ ಚಾಲಕ ರಾಮಕೃಷ್ಣ ಶ್ಯಾನ್‌ಭಾಗ್ ಅವರ ಮೇಲೆ ನಡೆದ ಹಲ್ಲೆ ಘಟನೆಯನ್ನು ಕರ್ನಾಟಕ ರಾಜ್ಯ ಕೆಸ್ಸಾರ್ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್‌ ಯೂನಿಯನ್ ಪುತ್ತೂರು ವಿಭಾಗ ಘಟಕ ಖಂಡಿಸಿದೆ.

ಕೆಎಸ್ಸಾರ್ಟಿಸಿ ಚಾಲಕ ರಾಮಕೃಷ್ಣ ಶ್ಯಾನ್‌ಭಾಗ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನುಕ್ರಮಕೈಗೊಳ್ಳಬೇಕು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಿಹಾನ್ ಶೇಖ್ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News