×
Ad

ಜ.7ರಂದು ಬೆಳ್ತಂಗಡಿಗೆ ಮುಖ್ಯಮಂತ್ರಿ: ದ.ಕ.ಜಿಲ್ಲಾದಿಕಾರಿಯಿಂದ ಕಾಮಗಾರಿಗಳ ಪರಿಶೀಲನೆ

Update: 2017-12-30 23:01 IST

ಬೆಳ್ತಂಗಡಿ, ಡಿ. 30: ನೂತನ ಮಿನಿ ವಿಧಾನ ಸೌಧ ಹಾಗೂ ಇನ್ನಿತರ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 7 ರಂದು ನೆರವೇರಿಸಲಿದ್ದು, ಈ ಹಿನ್ನಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಶನಿವಾರ ಆಗಮಿಸಿ ತಾಲೂಕಿನ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಬಳಿಕ ಉದ್ಘಾಟನಾ ಸಮಾರಂಭದ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಮಾರ್ಗದರ್ಶನ ನೀಡಿದರು.

ಜ. 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದಿಂದ ನೇರವಾಗಿ ಬೆಳ್ತಂಗಡಿಗೆ ಆಗಮಿಸಲಿದ್ದಾರೆ. ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನಲೆಯಲ್ಲಿ ಹೆಲಿಪ್ಯಾಡ್‌ಗಾಗಿ ಶನಿವಾರ ಮಧ್ಯಾಹ್ನ ತಾಲೂಕಿಗೆ ಆಗಮಿಸಿದ ಜಿಲ್ಲಾಧಿಕಾರಿ ಸೆಂಥಿಲ್ ಅವರು ಶಾಸಕ ಕೆ. ವಸಂತ ಬಂಗೇರ ಅವರೊಂದಿಗೆ ಬೆಳ್ತಂಗಡಿ ಜ್ಯೂನಿಯರ್ ಕಾಲೇಜಿನ ಕ್ರೀಡಾಂಗಣವ್ನು ವೀಕ್ಷಿಸಿದರು.

ಮುಖ್ಯಮಂತ್ರಿಯವರು ಬೆಳ್ತಂಗಡಿ ಆಗಮಿಸಿ ಮೊದಲಿಗೆ ಪಟ್ಟಣ ಪಂಚಾಯತ್ ಕುಡಿಯುವ ನೀರಿನ ಕಾಮಗಾರಿಯನ್ನು ಉದ್ಘಾಟಿಸಿ, ಬಳಿಕ ಮಿನಿ ವಿಧಾನಸೌಧವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಎರಡು ಕಾಮಗಾರಿಯನ್ನು ಶಾಸಕರ ಜತೆಗೂಡಿ ಜಿಲ್ಲಾಧಿಕಾರಿಯವರು ವೀಕ್ಷಣೆ ನಡೆಸಿ, ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಬಳಿಕ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಾಲೋಚನೆ ಸಭೆ ಶಾಸಕ ಕೆ. ವಸಂತ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ಇಲ್ಲಿನ ತಾಲೂಕು ಪಂ. ಸಭಾಂಗಣದಲ್ಲಿ ನಡೆಯಿತು.

ವಿವಿಧ ಇಲಾಖೆಯ ಅಧಿಕಾರಿಗಳ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿಸಿ ಸೆಂಥಿಲ್ ಅವರು, ಮುಖ್ಯಮಂತ್ರಿಯವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಜ. 7 ರಂದು ಶಿವಮೊಗ್ಗದಿಂದ ನೇರವಾಗಿ ಬೆಳ್ತಂಗಡಿಗೆ ಆಗಮಿಸಲಿದ್ದಾರೆ. ಸುಮಾರು 10:40ರ ಅಂದಾಜಿಗೆ ಬೆಳ್ತಂಗಡಿಗೆ ಬರಲಿದ್ದು, ಬೆಳ್ತಂಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ ಸೇರಿದಂತೆ ತಾಲೂಕಿನ ವಿವಿಧೆಡೆಯ ಸುಮಾರು 76 ಕೋ. ರೂ. ಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದು, ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಸೌಲಭ್ಯವನ್ನು 1800 ಮಂದಿ ಫಲಾನುಭವಿಗಳಿಗೆ ವಿತರಿಸಲಿದ್ದಾರೆ. ವಿವಿಧ ಇಲಾಖೆಯ ಸುಮಾರು 17 ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಲಿದೆ ಎಂದರು.

ಮುಖ್ಯಮಂತ್ರಿ  ಆಗಮಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಶಿಸ್ತಿನಿಂದ ನಡೆಯಬೇಕು. ಸಭಾ ವೇದಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಯಾರೆಲ್ಲಾ ಸಭಾ ವೇದಿಕೆಯಲ್ಲಿ ಇರುತ್ತಾರೆ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ಅವರಿಗೆ ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಸಭೆಗೆ ಆಗಮಿಸಿದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಪಟ್ಟಣ ಪಂಚಾಯಿತಿಗೆ ಸೂಚಿಸಿದರು. ಪೋಲಿಸ್ ಇಲಾಖೆ ಸೂಕ್ತ ಬಂದೋಬಸ್ತು ಮಾಡಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಸಚ್ಚತೆಯ ಬಗ್ಗೆ ಗಮನ ನೀಡಬೇಕು. ಫಲಾನುಭವಿಗಳು ಹಾಜರಿರುವಂತೆ ಎಲ್ಲಾ ಇಲಾಖೆಗಳು ಗಮನಿಸಬೇಕು. ಎಲ್ಲಾ ಇಲಾಖೆಯವರು ಒಂದೇ ಟೀಂ ಆಗಿ ವರ್ಕ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ವಸಂತ ಬಂಗೇರ ಅವರು, ಇಲಾಖೆಗೆ ನೀಡಿದ ಜವಾಬ್ದಾರಿಯನ್ನು ಅಧಿಕಾರಿಗಳು ಸರಿಯಾಗಿ ನಿಭಾಯಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕು. ಎಲ್ಲಾ ಇಲಾಖೆಯಿಂದಾಲು ಪಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮುತುವರ್ಜಿ ವಹಿಸಬೇಕು ಎಂದರು.

 ಸಮಾಲೋಚನಾ ಸಭೆಯಲ್ಲಿ ಪಟ್ಟಣ ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ ಮೂರ್ತಿ, ತಹಶೀಲ್ದಾರ್ ಸಣ್ಣ ರಂಗಯ್ಯ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಿ. ಆರ್. ನರೇಂದ್ರ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News