×
Ad

ದೇಶಕ್ಕೆ ಉತ್ತಮ ನಾಯಕನ ಅಗತ್ಯವಿದೆ: ಸಚಿವ ಖಾದರ್‌

Update: 2017-12-31 22:24 IST

ಮಂಗಳೂರು, ಡಿ. 31: ಅಶಿಸ್ತು, ಭ್ರಷ್ಟಾಚಾರ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ದೇಶಕ್ಕೆ ಭದ್ರ ಬುನಾದಿ ನೀಡುವ ಉತ್ತಮ ನಾಯಕರ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ರವಿವಾರ ನಗರದ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ರಾಷ್ಟ್ರೀಯಮಟ್ಟದ ರೋವರ್ಸ್‌ ಮತ್ತು ರೇಂಜರ್ಸ್‌ ಶಿಬಿರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಡಾಕ್ಟರ್, ಎಂಜಿನಿಯರ್ ಆಗಲು ಒಂದೊಂದು ಶಿಕ್ಷಣ ಸಂಸ್ಥೆಗಳಿರುವಂತೆ ಉತ್ತಮ ರಾಜಕಾರಣಿ ನಿರ್ಮಾಣ ಮಾಡುವ ಶಿಕ್ಷಣ ಸಂಸ್ಥೆಯ ಅಗತ್ಯವಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯವಿದೆ. ಶಿಬಿರದಲ್ಲಿ ಪ್ರಯೋಜನ ಪಡೆದ ಶಿಬಿರಾರ್ಥಿಗಳು ತಮ್ಮ ಸೇವೆಯನ್ನು ಹಳ್ಳಿಗಳಿಗೂ ವಿಸ್ತರಿಸಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಶಿಬಿರದಲ್ಲಿ ಪಡೆದ ಮಾಹಿತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ಕರೆ ನೀಡಿದರು.

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರೆ.ಫಾ.ಡಯೋನಿಶಿಯಸ್ ವಾಜ್ ಮಾತನಾಡಿ, ದೇಶದಲ್ಲಿ ಕೆಲವೊಮ್ಮೆ ಅನಗತ್ಯ ಕಾರಣಗಳಿಂದ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತದೆ. ಇಂತಹ ಬೆಂಕಿಯನ್ನು ನಂದಿಸುವ ಕೆಲಸ ಸ್ಕೌಟ್ಸ್, ಗೈಡ್ಸ್ ಅಭ್ಯರ್ಥಿಗಳಿಂದ ನಡೆಯಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದರು.

ಸ್ವಾಂತಂತ್ರ ಹೋರಾಟಗಾರ ವಿ.ಪಿ. ದೀನ್‌ದಯಾಲ್ ನಾಯ್ಡು ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪನಮನ ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ವಹಿಸಿದ್ದರು. ಸ್ಕೌಟ್ಸ್ ರಾಜ್ಯ ಸಹಾಯಕ ಆಯುಕ್ತ ಡಿ.ವೆಂಕಟೇಶ್, ನಿರ್ದೇಶಕ ಆರ್.ಕೃಷ್ಣಸ್ವಾಮಿ, ಸ್ಕೌಟ್ಸ್, ಗೈಡ್ಸ್ ಪ್ರಮುಖರಾದ ಶಾಂತಾ ವಿ.ಆಚಾರ್ಯ, ರಮಾನಾಥ್, ವಾಸುದೇವ ಬೋಳೂರು, ಪ್ರಭಾಕರ ಭಟ್, ಎಂ.ಎ. ಚೆಲ್ಲಯ್ಯ, ಅನಲೇಂದ್ರ ಶರ್ಮ, ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಪ್ರಮುಖರಾದ ಡಾ.ಎನ್.ಜಿ. ಮೋಹನ್ ಸ್ವಾಗತಿಸಿದರು. ಕಾರ್ಯದರ್ಶಿ ಜಿ.ಕೆ.ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News