ವಿಟ್ಲ ಹೋಬಲಿಯನ್ನು ತಾಲೂಕು ಕೇಂದ್ರ ಘೋಷಣೆ ಮಾಡುವಂತೆ ಆಗ್ರಹಿಸಿ ಧರಣಿ

Update: 2018-01-02 14:29 GMT

ಬಂಟ್ವಾಳ. ಜ. 2: ವಿಟ್ಲ ಹೋಬಲಿಯನ್ನು ತಾಲೂಕು ಕೇಂದ್ರ ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‍ನಲ್ಲಿ ಮಂಗಳವಾರ ವಾಹನ ತಡೆದು ಪ್ರತಿಭಟನೆ ನಡೆಸಲಾಯಿತು. 

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, 45 ವರ್ಷದಿಂದ ವಿಟ್ಲ ತಾಲೂಕು ಕೇಂದ್ರ ಮಾಡಿ ಎಂದು ಆಗ್ರಹಿಸುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ಗ್ರಾಮೀಣ ಭಾಗದ ಜನತೆಗೆ ಇನ್ನೂ ಶಕ್ತಿ ತುಂಬಿಲ್ಲ. ಈ ಭಾಗದಲ್ಲಿರುವ ರೈತರಿಗೆ ಹಾಗೂ ನಾಗರಿಕರು ಇಚ್ಛಾ ಶಕ್ತಿಯ ಕೊರತೆ ಇದೆ ಎಂದರು.

ವಿಟ್ಲ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿದೆ. ಅಭಿವೃದ್ಧಿ ಹಾಗೂ ಹೊಸ ಕಟ್ಟಡಗಳು ತಲೆ ಎತ್ತುತ್ತಿದೆ. ಆದರೆ ತಾಲೂಕು ಆಗಬೇಕು ಎಂಬ ಬೇಡಿಕೆಗೆ ವ್ಯಾಪಾರಿಗಳಿಂದ ಬೆಂಬಲ ಸಿಗದಿರುವುದು ಬೇಸರದ ವಿಚಾರವಾಗಿದೆ. ಜನರಿಗೆ ಸದ್ಯಕ್ಕೆ ತಾಲೂಕು ಕೇಂದ್ರದ ಪ್ರಯೋಜನದ ಬಗ್ಗೆ ಅರ್ಥವಾದಂತೆ ಕಾಣುತ್ತಿಲ್ಲ. ನಿನ್ನೆಯ ಮಾಡಿದ ಮನವಿಗೆ ಯಾರೊಬ್ಬರೂ ಸ್ಪಂದಿಸಿಲ್ಲ. ಹಾಗೆಂದು ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
45 ವರ್ಷದಿಂದ ತಾಲೂಕು ಆಗಬೇಕು ಎಂಬ ಬೇಡಿಕೆ ಪಟ್ಟಿಯಲ್ಲಿತ್ತು. ಬೇರೆ ಎಲ್ಲ ಪ್ರದೇಶಗಳು ತಾಲೂಕು ಕೇಂದ್ರವಾಗಿದೆ. ಆ ಪಟ್ಟಿಯಲ್ಲಿದ್ದ ವಿಟ್ಲ ತಾಲೂಕು ಕೇಂದ್ರ ಬೇಡಿಕೆ ಜಾರಿ ಹೋಗಿದೆ ಎಂದು ಹೇಳಿದರು. 

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲು ಮಾತನಾಡಿ, 60 ಸಾವಿರ ಜನಸಂಖ್ಯೆ ಇರುವ ಭಾಗವನ್ನು ತಾಲೂಕು ಕೇಂದ್ರ ಮಾಡಲಾಗಿದೆ. ಆದರೆ ಒಂದೂವರೆ ಲಕ್ಷ ಜನಸಂಖ್ಯೆ ಇರುವ ವಿಟ್ಲವನ್ನು ಇನ್ನೂ ಘೋಷಣೆ ಮಾಡದ್ದರ ಹಿಂದೆ ಮೂರು ರಾಜಕೀಯ ಪಕ್ಷಗಳಿವೆ. ರಾಜಕೀಯ ಪಕ್ಷಗಳ ಕಾಲೆಳೆತದಿಂದಾಗಿ ವಿಟ್ಲ ಅಭಿವೃದ್ಧಿ ಆಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇಂದು ವಿಟ್ಲ ತಾಲೂಕು ಆಗಿಲ್ಲ ಎಂದು ದೂರಿದರು.

ವಿಧಾಸಭೆಯಲ್ಲಿ ಶಾಸಕರ ವೇತನ ಹೆಚ್ಚಳವಾಗುತ್ತದೆ ಎಂದಾದರೆ, ಮೇಜು ಕುಟ್ಟಿ ಬೆಂಬಲ ನೀಡಲು ಎಲ್ಲಾ ಪಕ್ಷದವರಿದ್ದಾರೆ. ಜನರಿಗೆ ಅಗತ್ಯವಾದ ವ್ಯವಸ್ಥೆಯ ಬಗ್ಗೆ ಮಾತನಾಡಲು ಯಾವೊಬ್ಬನಿಗೂ ಬಾಯಿ ಬರುತ್ತಿಲ್ಲ, ಆಸಕ್ತಿಯೂ ಇಲ್ಲ. ವಿಟ್ಲ ತಾಲೂಕು ಕೇಂದ್ರವಾಗಬೇಕೆಂಬ ಕಾಳಜಿ ಈ ಭಾಗದ ಜನಪ್ರತಿನಿಧಿಗಳಿಗಿಲ್ಲ. ಅಂಗಡಿ ಮಾಲಕರಿಗೆ ವ್ಯಾಪಾರವೇ ಮುಖ್ಯ ಹೊರತು ಜನರಿಗೆ ಅಗತ್ಯವಾದ ಹೋರಾಟ ಮುಖ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು, ಹಸೈನಾರ್ ಕಡಂಬು, ಲಯನ್ಸ್ ಕ್ಲಬ್‍ನ ಡಾ ಇರ್ಮಾಡಿ ಶರಶ್ಚಂದ್ರ ಶೆಟ್ಟಿ, ಲಕ್ಷ್ಮೀನಾರಾಯಣ ಅಡ್ಯಂತಾಯ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ ಮೂಸ ಮೊದಲಾದವರು ಪ್ರತಿಭಟನೆಯಲ್ಲಿ ಮಾತನಾಡಿದರು. 
ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ, ಹಿರಿಯ ಹೋರಾಟಗಾರ ಮುರುವ ಮಹಾಬಲ ಭಟ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಸಂತ ಶೆಟ್ಟಿ, ಮನೋಹರ್ ರೈ, ದಯಾನಂದ ರೈ ಕಬ್ಬಿನಹಿತ್ತಲು, ಲಿಂಗಪ್ಪ ಗೌಡರು, ಸುದರ್ಶನ್ ಪಡಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ರಸ್ತೆ ತಡೆ: ಬಂಟ್ವಾಳ ತಹಶೀಲ್ದಾರ್ ತುರ್ತು ಕಾರ್ಯ ನಿಮಿತ್ತ ಬೆಂಗಳೂರು ತೆರಳಿದ್ದರಿಂದ, ಮನವಿ ಪಡೆಯಲು ಜಿಲ್ಲಾಧಿಕಾರಿ ಸ್ಥಳೀಯ ಕಂದಾಯ ನಿರೀಕ್ಷಕರನ್ನು ಕಳುಹಿಸುವುದಾಗಿ ದೂರವಾಣಿ ಮೂಲಕ ಹೇಳಿದ್ದಕ್ಕೆ ರೈತ ಸಂಘ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದು, ಅಲ್ಲದೇ ಸ್ಥಳೀಯರು ಬರುವುದಾದರೆ ಮನವಿಯ ಪ್ರತಿಯನ್ನು ಅಂಚೆ ಡಬ್ಬಿಗೆ ಹಾಕಿ ಸರಕಾರಕ್ಕೆ ತಲುಪಿಸಲಾಗುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ನಿಗದಿತ ಸಮಯದ ಒಳಗೆ ಬರದಿದ್ದರೆ, ಬರುವವರೆಗೆ ರಸ್ತೆ ತಡೆ ನಡೆಸುವುದಾಗಿ ಹೇಳಿತು. ಆದರೂ ಮಂಗಳೂರಿನಿಂದ ಅರ್ಧ ತಾಸು ಅಧಿಕಾರಿ ತಡವಾದ್ದರಿಂದ ನಾಲ್ಕು ಮಾರ್ಗದಲ್ಲಿ ರಸ್ತೆ ತಡೆದು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್ ಮಾಣಿಕ್ಯ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಬೇಡಿಕೆಯನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮುಟ್ಟಿಸಲಾಗುವುದು ಎಂದರು. 

ನೀರಸ ಪ್ರತಿಕ್ರಿಯೆ: ಪ್ರತಿಭಟನೆ ವೇಳೆ ವಿಟ್ಲದ ಅಂಗಡಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ನೀಡುವಂತೆ ಈ ಹಿಂದೆ ಹೋರಾಟಗಾರರು ಮನವಿ ಮಾಡಿದ್ದರು. ಆದರೆ ಬೆಳಿಗ್ಗೆ ಪ್ರತಿಭಟನೆ ನಡೆಯುತ್ತಿದ್ದರೂ ಕೂಡಾ ಕೇವಲ ಬೆರಳೆಣಿಯಷ್ಟು ವ್ಯಾಪಾರಿಗಳು ಮಾತ್ರ ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಉಳಿದವರು ಎಂದಿನಂತೆ ವ್ಯಾಪಾರ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News