ನ್ಯಾಯ ಸಿಗದಿದ್ದರೆ ಮುಖ್ಯಮಂತ್ರಿ ಭೇಟಿಯ ದಿನ ಜಿಲ್ಲಾ ಬಂದ್‍ಗೆ ಚಿಂತನೆ : ಜಗದೀಶ್ ಶೇಣವ

Update: 2018-01-02 14:52 GMT

ಪುತ್ತೂರು,ಜ.2 : ಕೇವಲ ಒಬ್ಬ ಚಿಲ್ಲರೆ ಪೊಲೀಸ್ ಅಧಿಕಾರಿಯ ವಿರುದ್ಧ ಇಡೀ ಹಿಂದೂ ಸಮಾಜ ಒಂದಾಗಿ ಇಷ್ಟೊಂದು ಸಂಖ್ಯೆಯಲ್ಲಿ ಹೋರಾಟ ನಡೆಸಬೇಕಾದ ದುರಾವಸ್ಥೆ ಎದುರಾಗಿದ್ದು, ಜ.5ರೊಳಗೆ ನ್ಯಾಯ ಸಿಗದಿದ್ದಲ್ಲಿ ಮುಖ್ಯಮಂತ್ರಿ ಭೇಟಿಯ ದಿನವಾದ ಜ.7ರಂದು ಜಿಲ್ಲಾ ಬಂದ್ ಮಾಡುವ ವಿಚಾರದಲ್ಲಿ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಹೇಳಿದ್ದಾರೆ.

ಸರ್ಕಾರ ಮತ್ತು ಪೊಲೀಸ್ ಇಲಾಖೆಯಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಪುತ್ತೂರಿನ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ಗದ್ದೆಯಲ್ಲಿ ನಡೆದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. 

ಕೇಸಿಗೆ ಹೆದರಿ ಮಾತನಾಡದೆ ಕುಳಿತುಕೊಳ್ಳುವ, ಪ್ರತಿಭಟನೆ ನಡೆಸದೆ ಸುಮ್ಮನಿರುವ ಜಾಯಮಾನದವರು ದಕ್ಷಿಣ ಕನ್ನಡದ ಹಿಂದೂ ಸಮಾಜದವರಲ್ಲ . ಹಿಂದೂ ಸಮಾಜ ಎದ್ದು ನಿಂತರೆ ಏನಾಗಬಹುದು ಎಂಬುವುದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿದಿರಬೇಕು. ಜಿಲ್ಲೆಯ ಎಸ್ಪಿಯವರು ಒಳ್ಳೆಯ ಅಧಿಕಾರಿ ಎಂದು ಹೇಳುತ್ತಿದ್ದಾರೆ. ಆದರೆ ದೇಶ ಪ್ರೇಮಿ ಸಂಘಟನೆಯಾದ ಬಜರಂಗದಳ ಮತ್ತು ದೇಶ ದ್ರೋಹಿ ಸಂಘಟನೆಯಾದ ಪಿಎಫ್‍ಐ ಸಂಘಟನೆಯನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಿರುವುದು ಸರಿಯಲ್ಲ. ಈ ಬಗ್ಗೆ ಅವರು ಚಿಂತನೆ ನಡೆಸಬೇಕು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಅವರನ್ನು ಗಡಿಪಾರು ಮಾಡಿದರೆ ಅದಕ್ಕೆ ಉತ್ತರ ನೀಡಲು ಜಿಲ್ಲೆಯಲ್ಲಿ ರತ್ನಾಕರ ಶೆಟ್ಟಿ ಅಂಥವರು ಸಾವಿರ ಮಂದಿ ಇದ್ದಾರೆ ಎಂಬುದು ಅವರಿಗೆ ನೆನಪಿರಬೇಕು ಎಂದರು. 

ರಮಾನಾಥ ರೈ ಅವರು ಸಚಿವರಾದದ್ದು ಅಲ್ಲಾಹುವಿನ ಕೃಪೆಯಿಂದಲೇ ಹೊರತು ಮಹಾಲಿಂಗೇಶ್ವರ, ಗಣಪತಿ ಸೇರಿದಂತೆ ಹಿಂದೂ ದೇವರ ಕೃಪೆಯಿಂದ ಅಲ್ಲ ಎಂಬುವುದನ್ನು ಅವರೇ ಹೆಳಿಕೊಂಡಿದ್ದಾರೆ. ಯಾರ ಕೃಪೆಯಿಂದ ಅವರು ಸಚಿವರಾಗಿದ್ದಾರೆ ಎಂಬುವುದನ್ನು ಈ ಬಾರಿ ಹಿಂದೂ ಸಮಾಜ ತೋರಿಸಿಕೊಡಬೇಕು ಎಂದು ಅವರು ತಿಳಿಸಿದರು.

ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿರುವ ಸಂಪ್ಯ ಎಸ್‍ಐ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿ ಚಂದ್ರ, ಕರುಣಾಕರ ಮತ್ತು ಸುರೇಶ್ ಅವರನ್ನು ಅಮಾನತುಗೊಳಿಸಬೇಕೆಂದು ಹೋರಾಟ ನಡೆಸುತ್ತಾ ಬಂದರೂ ಈ ತನಕ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆಯ ಅಧಿಕಾರಿಗಳಿಂದ ಹಿಂದೂ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ನಮ್ಮ ಪ್ರತಿಭಟನೆ ಇಲ್ಲಿಗೆ ನಿಲ್ಲಬಾರದು. ನಾಳೆಯಿಂದಲೇ ಸಂಪ್ಯ ಠಾಣೆಯ ಎದುರು ಪ್ರತಿಭಟನೆ ಆರಂಭವಾಗಬೇಕು, ನ್ಯಾಯ ಸಿಗುವ ತನಕವೂ ಹೋರಾಟ ಮುಂದುವರಿಯಬೇಕು ಎಂದ ಅವರು ತಿಳಿಸಿದರು. 

ಹಿಂದೂ ಜಾಗರಣಾ ವೇದಿಕೆಯ ನಿಕಟಪೂರ್ವ ರಾಜ್ಯ ಸಂಚಾಲಕರಾದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ  ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಮಾತನಾಡಿ,  ಅಹಿಂದ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಹಿಂದ,  ಹಿಂದುಳಿದ ವರ್ಗದವರ ರಕ್ಷಣೆಯ ಬದಲು ಅಲ್ಪಸಂಖ್ಯಾತ ವರ್ಗದ ಪರವಹಿಸಿ 'ಸಿದ್ದ ರಾವಣ' ಸರ್ಕಾರ ಎಂಬುದನ್ನು ತೋರಿಸಿಕೊಟ್ಟಿದೆ. ಆಡಳಿತಕ್ಕೆ ಬಂದ ನಾಲ್ಕನೇ ದಿನವೇ ಗೋಹತ್ಯಾ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಹಿಂದೂ ಸಮಾಜ ವಿರೋಧಿ ನೀತಿ ಆರಂಭಿಸಿ, ಹಿಂದೂ ಸಮಾಜವನ್ನು ನಿರಂತರವಾಗಿ ತುಳಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. 

ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ, ಹಿಂದೂ ಯುವತಿಯರಿಗೆ ಅನ್ಯಾಯವಾದರೆ ಇಲ್ಲಿ ನ್ಯಾಯ ಸಿಗುತ್ತಿಲ್ಲ. ಅಮಾಯಕ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವ ಸಂಪ್ಯ ಠಾಣೆಯ ಎಸ್‍ಐ ಮತ್ತು ಅಲ್ಲಿನ ಮೂವರು ಸಿಬ್ಬಂದಿ ವಿರುದ್ಧ  ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಬೆಲೆ ಇಲ್ಲ. ಆದರೆ ಸುಬ್ರಹ್ಮಣ್ಯದಲ್ಲಿ ನಡೆದ ಹಿಂದೂ ಯುವತಿಯೊಬ್ಬಳನ್ನು ಪುಸಲಾಯಿಸಿಕೊಂಡು ಬಂದ ಪ್ರಕರಣಕ್ಕೆ ಸಂಬಂಧಿಸಿ ಪಿಎಫ್‍ಐ ಸಂಘಟನೆ ಪ್ರತಿಭಟನೆ ನಡೆಸಲು ಮುಂದಾಗಿದೆ ಎಂಬ ಕಾರಣಕ್ಕಾಗಿ ಪೊಲೀಸ್ ಇಲಾಖೆ ಅಲ್ಲಿನ ಇಬ್ಬರು ಪೊಲೀಸರನ್ನು ಅಮಾನತು ಮಾಡಲು ಹೊರಟಿದೆ. ಇಲ್ಲಿ ಎಲ್ಲಾ ಸಂಘಟನೆಗಳಿಗೆ ಒಂದೇ ನ್ಯಾಯವೇ ಅಥವಾ ಪಿಎಫ್‍ಐ ಸಂಘಟನೆಗೆ ಇನ್ನೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.    

ಕಲ್ಲಡ್ಕದಲ್ಲಿ ನಡೆದ ಕೇಶವ ಅವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಒಬ್ಬನೇ ಒಬ್ಬ ಆರೋಪಿಯ ಬಂಧನವಾಗಿಲ್ಲ. ಹತ್ಯಾ ಯತ್ನ ನಡೆದಿದ್ದರೂ ಅದು ದೊಡ್ಡ ಮೊಕದ್ದಮೆ ಆಗುವುದಿಲ್ಲ. ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ರತ್ನಾಕರ ಶೆಟ್ಟಿ ಅವರು ಯಾವುದೇ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಂಡಿಲ್ಲ. ಯಾವುದೇ ಕೇಸಿನಲ್ಲಿ ಅವರಿಗೆ ಶಿಕ್ಷೆ ಆಗಿಲ್ಲ. 2009ರ ಬಳಿಕ ಅವರ ಮೇಲೆ ಒಂದೇ ಒಂದು ಕೌಂಟರ್ ಕೇಸು ಇದ್ದರೂ ಮುಸ್ಲಿಮರ ಓಲೈಕೆಯ ಸಲುವಾಗಿ ಖಲೀಲ್ ಜೊತೆ ಅವರನ್ನೂ ಗಡಿಪಾರು ಮಾಡುವ ಕೆಲಸ ನಡೆದಿದೆ ಎಂದು ದೂರಿದ ಅವರು, ನಾವು ಖಾಕಿ ಬಟ್ಟೆಗೆ ಮರ್ಯಾದೆ ಕೊಡುತ್ತೇವೆ. ಆದರೆ ಪೊಲೀಸರು ಯಾರೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸಬೇಕು ಎಂಬುವುದನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಹೇಗೆ ಕಲಿಸಬೇಕೆನ್ನುವುದು ಹಿಂದೂ ಸಮಾಜಕ್ಕೆ ತಿಳಿದಿದೆ ಎಂದು ಎಚ್ಚರಿಸಿದರು.

ಅಧಿಕಾರ ಮತ್ತು ಅಧಿಕಾರಿಗಳು ನಮ್ಮ ಕೈಯಲ್ಲಿದೆ ಎಂದು ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಮುಂದುವರಿಸಿದರೆ, ಹಿಂದೂ ಸಮಾಜವನ್ನು ತುಳಿಯುವ ಕೆಲಸ ಮಾಡಿದರೆ ಸಿದ್ಧರಾಮಯ್ಯ ಸರ್ಕಾರ ಉಳಿಯಲು ಹಿಂದೂ ಸಮಾಜ ಬಿಡುವುದಿಲ್ಲ. ರಮಾನಾಥ ರೈ ಅವರೂ ಮುಂದುವರಿಯಲು ಅವಕಾಶ ನೀಡುವುದಿಲ್ಲ. ಒಂದು ಹಂತದ ತನಕ ಹಿಂದೂ ಸಮಾಜ ಸಹಿಸುತ್ತದೆ. ಸಿಡಿದೆದ್ದರೆ ಏನಾಗುತ್ತದೆ ಎಂಬುವುದನ್ನು ಅವರೇ ತಿಳಿದುಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.  

ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲೇ ಸಂಪ್ಯ ಠಾಣೆ ಇದೆ. ನಿಮ್ಮ ಕ್ಷೇತ್ರ ವ್ಯಾಪ್ತಿಯ ಹಿಂದೂ ಜನತೆಗೆ ಸಂಪ್ಯ ಠಾಣೆಯಲ್ಲಿ ನ್ಯಾಯ ಒದಗಿಸಬೇಕಾದ ಜವಾಬ್ದಾರಿ ನಿಮಗೂ ಇದೆ ಎಂದು ಎಂದು ಪುತ್ತೂರಿನ ಶಾಸಕಿಯವರನ್ನು ಆಗ್ರಹಿಸಿದ ಸತ್ಯಜಿತ್ ಸುರತ್ಕಲ್ ಅವರು, ವಿಟ್ಲಕ್ಕೆ ಹೋಗಿ ಗೋಪೂಜೆ ಮಾಡಿರುವ ನೀವು ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಿತರಂತರವಾಗಿ ಅಕ್ರಮ ಗೋಸಾಗಾಟ, ಅಲ್ಲಲ್ಲಿ ಗೋವಧೆ ನಡೆಯುತ್ತಿದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. 

ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್‍ವೆಲ್ ಮತ್ತು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಭಾಗವಹಿಸಿದ್ದರು. ಹಿಂದೂ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ಬಜರಂಗದಳ ದಕ್ಷಿಣ ಪ್ರಾಂತ ಗೋರಕ್ಷಕ್ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ವಂದಿಸಿದರು. ನವೀನ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News