ಜ.4 ಮಣಿಪಾಲ ಅಕಾಡೆಮಿಯ ಪ್ಲಾಟಿನಂ ಜ್ಯುಬಿಲಿ ಉದ್ಘಾಟನೆ

Update: 2018-01-02 14:53 GMT

ಮಣಿಪಾಲ, ಜ.2: 1942ರಲ್ಲಿ ಸ್ಥಾಪನೆಗೊಂಡ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ (ಎಜಿಇ) 75 ವರ್ಷಗಳನ್ನು ಪೂರ್ಣ ಗೊಳಿಸಿದ್ದು, ಈ ಪ್ರಯುಕ್ತ ಪ್ಲಾಟಿನಂ ಜ್ಯುಬಿಲಿ ಸಂಭ್ರಮ ಗುರುವಾರ ಮಣಿಪಾಲದ ಫ್ಯಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಚೈತ್ಯ ಹಾಲ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಹಾಗೂ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.

ಇಂದು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಬಲ್ಲಾಳ್, ಅಕಾಡೆಮಿ ಉಡುಪಿಯಲ್ಲಿ ಆರಂಭಿಸಿದ ಮೊತ್ತಮೊದಲ ಪದವಿ ಕಾಲೇಜ್ ಆದ ಎಂಜಿಎಂ ಕಾಲೇಜಿನ ಮೊದಲ ಬ್ಯಾಚ್ ಪದವಿ ವಿದ್ಯಾರ್ಥಿಯಾಗಿದ್ದ ನಾಗಾಲ್ಯಾಂಡ್ ರಾಜ್ಯಪಾಲರಾದ ಪಿ.ಬಿ.ಆಚಾರ್ಯ, ಪ್ಲಾಟಿನಂ ಜ್ಯುಬಿಲಿ ಸಂಭ್ರಮವನ್ನು ಜ.4ರ ಗುರುವಾರ ಬೆಳಗ್ಗೆ 10:00ಗಂಟೆಗೆ ಉದ್ಘಾಟಿಸುವರು ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಅಕಾಡೆಮಿಯ ಹಿರಿಯ ಅಧಿಕಾರಿಗಳ ನೇಕರನ್ನು ಸನ್ಮಾನಿಸಲಾಗುವುದು. ಅಲ್ಲದೇ ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ವಿದ್ಯಾರ್ಥಿಗಳು ತಯಾರಿಸಿದ ಅಕಾಡೆಮಿ ಕುರಿತ ಸಾಕ್ಷಚಿತ್ರ ವನ್ನು ಪ್ರದರ್ಶಿಸಲಾಗುವುದು. ಡಾ.ಟಿಎಂಎ ಪೈ ಮಣಿಪಾಲದಲ್ಲಿ ಪ್ರಾರಂಭಿಸಿದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೂ ಅಕಾಡೆಮಿ ತಾಯಿ ಬೇರು ಇದ್ದಂತೆ ಎಂದವರು ನುಡಿದರು.

ಪ್ಲಾಟಿನಂ ಜ್ಯುಬಿಲಿ ಸಂಭ್ರಮದ ಸಮಾರೋಪ ಸೆ.8ರಂದು ನಡೆಯಲಿದೆ ಎಂದ ಅವರು ಅಕಾಡೆಮಿ ಸ್ಥಾಪನೆಯ 75 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ಇದರ ಅಂಗಸಂಸ್ಥೆಗಳು ಈ ವರ್ಷ ಹಮ್ಮಿಕೊಂಡಿರುವ ಕೆಲವು ಯೋಜನೆಗಳ ರೂಪುರೇಷೆಗಳನ್ನು ಅವರು ಸುದ್ದಿಗೋಷ್ಠಿಯಲ್ಲಿ ತೆರೆದಿಟ್ಟರು.

ಮಣಿಪಾಲದ ಮಾಧವಕೃಪಾ ಸ್ಕೂಲ್‌ನಲ್ಲಿ ಪ್ರಾಥಮಿಕ ಪೂರ್ವ ಹಾಗೂ ಪ್ರಾಥಮಿಕ ತರಗತಿಗಳಿಗೆ ಸುಮಾರು 21 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸ ಲಾದ ಹೊಸ ಕಟ್ಟಡ ಎಪ್ರಿಲ್ ತಿಂಗಳಲ್ಲಿ ಕಾರ್ಯಾರಂಭಿಸಲಿದೆ. ಇದರಲ್ಲಿ ತಲಾ 40 ವಿದ್ಯಾರ್ಥಿಗಳ 38 ಕ್ಲಾಸ್‌ರೂಮ್‌ಗಳು, ಎರಡು ಮೊಂಟಿಸ್ಸೇರಿ ರೂಮ್‌ಗಳೊಂದಿಗೆ ಐದು ಪ್ರಯೋಗಾಲಯಗಳು, ಬಹೂದ್ದೇಶಿತ ಸಭಾಂಗಣ ಇರಲಿದೆ. ಇದರಿಂದ ಶಾಲೆಯ ವಿದ್ಯಾರ್ಥಿಗಳ ಸಾಮರ್ಥ್ಯ 2000ದಿಂದ 5000ಕ್ಕೇರಲಿದೆ ಎಂದರು.

ಮಾಹೆ ಹಾಗೂ ಡಾ.ಟಿಎಂಎ ಪೈ ಫೌಂಡೇಷನ್‌ಗಳು ಜಂಟಿಯಾಗಿ ಮಂಗಳೂರಿನಲ್ಲಿರುವ ಡಾ.ಟಿಎಂಎ ಪೈ ಕನ್ವೇನ್ಶನ್ ಸೆಂಟರ್ ರೀತಿಯ ಸುಮಾರು 25ರಿಂದ 30 ಕೋಟಿ ರೂ.ವೆಚ್ಚದ ಕೇಂದ್ರವನ್ನು ಉಡುಪಿಯಲ್ಲೂ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಎಂಜಿಎಂ ಕಾಲೇಜು ಹಿಂಭಾಗದಲ್ಲಿ ಜಾಗವನ್ನು ಗುರುತಿಸಲಾಗಿದೆ. ಇದರಲ್ಲಿ 1,200 ಸಾಮರ್ಥ್ಯದ ಕೇಂದ್ರ ಸಭಾಂಗಣ, ಎರಡು ಮಿನಿ ಹಾಲ್, 800 ಮಂದಿ ಸಾಮರ್ಥ್ಯದ ಭೋಜನಗೃಹ ಹಾಗೂ ಅಡುಗೆ ಮನೆ ಇರಲಿದೆ ಎಂದು ಡಾ.ಬಲ್ಲಾಳ್ ತಿಳಿಸಿದರು.

ಶೈಕ್ಷಣಿಕ ಸಂಶೋಧನಾ ಕೇಂದ್ರ:  ಮಾಹೆ ಡೀಮ್ಡ್ ವಿವಿಯ ಕುಲಪತಿ ಡಾ.ವಿನೋದ್ ಭಟ್ ಮಾತನಾಡಿ, ಅಕಾಡೆಮಿಯ 75ವರ್ಷದೊಂದಿಗೆ ಮಾಹೆ ತನ್ನ ಬೆಳ್ಳಿಹಬ್ಬವನ್ನೂ ಈ ವರ್ಷ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಮಾಹೆ ಒಂದು ಶೈಕ್ಷಣಿಕ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಿದ್ದು, ಇದರಲ್ಲಿ ಕಲಿಕೆಯ ಹೊಸ ಪದ್ಧತಿಗಳನ್ನು ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸುವ ಕುರಿತು ಸಂಶೋಧನೆ ನಡೆಯಲಿದೆ ಎಂದರು.

ಡಾ.ಟಿಎಂಎ ಪೈ ಫೌಂಡೇಷನ್‌ನ ಕಾರ್ಯದರ್ಶಿ ಟಿ.ಅಶೋಕ ಪೈ ಮಾತನಾಡಿ, ಈ ವರ್ಷ ಫೌಂಡೇಷನ್ ಐದು ಕೋಟಿ ರೂ.ಗಳನ್ನು ವ್ಯಯಿಸಿ ಅಕಾಡೆಮಿ ವಿದ್ಯಾಸಂಸ್ಥೆಗಳ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸು ವುದರಲ್ಲದೇ, ಎಂಜಿಎಂ ಕಾಲೇಜಿನ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ ಎಂದರು.

ಅಕಾಡೆಮಿಯ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಡಾ.ಎಚ್. ಶಾಂತರಾಮ್, ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಜಿ.ಕೆ.ಪ್ರಭು ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News