ಪರ್ಕಳ ಲಯನ್ಸ್ ಕ್ಲಬ್‌ಗೆ ಬೆಳ್ಳಿಹಬ್ಬದ ಸಂಭ್ರಮ : ಜ.4ರಿಂದ ಲಯನ್ಸ್ ಸಪ್ತಾಹ
ಉಡುಪಿ, ಜ.2: 1993ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ಲಯನ್ಸ್ ಪರ್ಕಳ ಈ ವರ್ಷ ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸುತಿದ್ದು, ಈ ಪ್ರಯುಕ್ತ ಜ.4ರಿಂದ ಉಡುಪಿ ಪುರಭವನದಲ್ಲಿ ಲಯನ್ಸ್ ಸಪ್ತಾಹವನ್ನು ಆಚರಿಸಲಿದೆ ಎಂದು ಲಯನ್ಸ್ ಪರ್ಕಳದ ಅಧ್ಯಕ್ಷ ಹರೀಶ್ ಎಂ.ಯು. ತಿಳಿಸಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ವಾದ ಸಮಾಜಸೇವಾ ಕಾರ್ಯಗಳೊಂದಿಗೆ ತಮ್ಮ ಕ್ಲಬ್, ಜಿಲ್ಲೆ 317ಸಿಯ ಪ್ರತಿಷ್ಠಿತ ಕ್ಲಬ್ ಆಗಿ ಮೂಡಿಬಂದಿದೆ. ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಮಾನೋತ್ಸವದ ಸಂಭ್ರಮದಲ್ಲಿದ್ದರೆ, ತಮ್ಮ ಕ್ಲಬ್ ಬೆಳ್ಳಿಹಬ್ಬದ ಸಂಭ್ರಮ ದಲ್ಲಿದೆ ಎಂದರು.
ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಲಾದ ಲಯನ್ಸ್ ಸಪ್ತಾಹದಲ್ಲಿ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವ, ರಾಜ್ಯ ಮಟ್ಟದ ಯುವ ಜನೋತ್ಸವ, ನೇತ್ರ ತಪಾಸಣಾ ಶಿಬಿರ, ಮಕ್ಕಳ ದಿನಾಚರಣೆ, ರಕ್ತದಾನ ಶಿಬಿರ ಹಾಗೂ ಅಶಕ್ತರಿಗೆ ನೆರವು ನೀಡುವ ಕಾರ್ಯಕ್ರಮಗಲನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಲಯನ್ಸ್ ಸಪ್ತಾಹವನ್ನು ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಲಯನ್ಸ್ ಕ್ಲಬ್‌ನ ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕ ವಿ.ವಿ.ಕೃಷ್ಣ ರೆಡ್ಡಿ ಅವರು ಜ.4ರ ಸಂಜೆ 4:30ಕ್ಕೆ ಉದ್ಘಾಟಿಸಲಿದ್ದಾರೆ. ಜಿಲ್ಲೆ 317ಸಿಯ ಜಿಲ್ಲಾ ಗವರ್ನರ್ ಎ.ಆರ್.ಉಜ್ಜನಪ್ಪ, ತಲ್ಲೂರು ಶಿವರಾಮ ಶೆಟ್ಟಿ, ಬಿ.ಜಯಕರ ಶೆಟ್ಟಿ ಇಂದ್ರಾಳಿ, ವಿ.ಜಿ.ಶೆಟ್ಟಿ ಮುಂತಾದವರು ಉಪಸ್ಥಿತರಿರುವರು ಎಂದರು.
ಇದಕ್ಕೆ ಮುನ್ನ ಬೆಳಗ್ಗೆ 9:30ಕ್ಕೆ ಪುರಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ 10ಗಂಟೆಗೆ ಅಜ್ಜರಕಾಡು ಜಿಲ್ಲಾ ಮೈದಾನದಲ್ಲಿ ವಿಶೇಷ ಮಕ್ಕಳ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟದಲ್ಲಿ ಉಡುಪಿ ಮತ್ತು ದ.ಕ.ಜಿಲ್ಲೆಗಳ 1000ಕ್ಕೂ ಅಧಿಕ ವಿಶೇಷ ಮಕ್ಕಳು ಪಾಲ್ಗೊಳ್ಳುವರು ಎಂದು ಹರೀಶ್ ನುಡಿದರು.
ಅಲ್ಲದೇ ಸಾಧಕರಿಗೆ ಸನ್ಮಾನ, ನಗೆಹಬ್ಬ, ಪ್ರತಿದಿನ ಸಂಜೆ ಕರಾವಳಿಯ ಪ್ರಸಿದ್ಧ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ, ಭಾರತಿ ಎಚ್.ಎಸ್., ವಿಶ್ವನಾಥ್ ಶೆಟ್ಟಿ, ಸುರೇಶ್ ಪ್ರಭು, ಮೇಟಿ ಮುದಿಯಪ್ಪ ಮುಂತಾದವರು ಉಪಸ್ಥಿತರಿದ್ದರು.