ಕಾಲೇಜು ವಿದ್ಯಾರ್ಥಿನಿಗೆ ಹಲ್ಲೆ; ಮೂವರು ಆರೋಪಿಗಳ ಸೆರೆ

Update: 2018-01-02 15:36 GMT

►ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದ ಪೊಲೀಸರು: ಆರೋಪ

►ಸವಿವರ ವರದಿ

ಮಂಗಳೂರು, ಜ.2: ನಗರ ಹೊರವಲಯದ ಪಿಲಿಕುಳ ನಿಸರ್ಗಧಾಮದ ಮಾನಸ ವಾಟರ್ ಪಾರ್ಕ್‌ನಲ್ಲಿ ಕಾಲೇಜೊಂದರ ವಿದ್ಯಾರ್ಥಿಗಳ ವಿಹಾರಕ್ಕೆ ಅಡ್ಡಿಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರ ಸಮ್ಮುಖ ವಿದ್ಯಾರ್ಥಿನಿಯೊಬ್ಬಳಿಗೆ ಹಲ್ಲೆ ನಡೆಸಿ ವಸ್ತುಶ: ಗೂಂಡಾಗಿರಿಗೈದ ಘಟನೆ ಮಂಗಳವಾರ ನಡೆದಿದೆ.

ಹಲ್ಲೆ ನಡೆಸಿದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೂ ಕೂಡ ಪ್ರಕರಣವನ್ನು ಕಾವೂರು ಪೊಲೀಸರು ಲಘುವಾಗಿ ಪರಿಗಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ನ್ಯಾಯವಾದಿಯೊಬ್ಬರು ಮಧ್ಯಪ್ರವೇಶಿಸಿದ ಬಳಿಕ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡರಲ್ಲದೆ ಮೂಡುಶೆಡ್ಡೆಯ ಸಂಪತ್ ಶೆಟ್ಟಿ, ವರದ, ದಿನೇಶ್ ಎಂಬವರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಿದ್ದಾರೆ.

ಘಟನೆಯ ವಿವರ: ಕಿನ್ನಿಗೋಳಿ ಸಮೀಪದ ಐಕಳ ತಾಳಿಪ್ಪಾಡಿಯ ಕಾಲೇಜೊಂದರ ಇಬ್ಬರು ಪಿಯು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಗಳು ಮಂಗಳವಾರ ಬೆಳಗ್ಗೆ ಕಾರೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಪಿಲಿಕುಳ ನಿಸರ್ಗಧಾಮಕ್ಕೆ ಆಗಮಿಸಿದ್ದರು. ಪಿಲಿಕುಳದ ಮಾನಸ ವಾಟರ್‌ಪಾರ್ಕ್‌ನಲ್ಲಿ ಈ ವಿದ್ಯಾರ್ಥಿಗಳು ವಿಹರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಘ ಪರಿವಾರದ ಕಾರ್ಯಕರ್ತರು ನಿಸರ್ಗಧಾಮದೊಳಗೆ ಪ್ರವೇಶಿಸಿ ವಿದ್ಯಾರ್ಥಿಗಳ ವಿಹಾರಕ್ಕೆ ಅಡ್ಡಿಪಡಿಸಿದರಲ್ಲದೆ ಹಲ್ಲೆ ನಡೆಸಲು ಯತ್ನಿಸಿದರು ಎನ್ನಲಾಗಿದೆ. ವಿಷಯ ತಿಳಿದ ಕಾವೂರು ಪೊಲೀಸರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ನಿಸರ್ಗಧಾಮದಿಂದ ಹೊರಗೆ ಕರೆದೊಯ್ಯಲು ಮುಂದಾದರು.

ಪೊಲೀಸರ ಸಮ್ಮುಖ ಹಲ್ಲೆ: ವಿದ್ಯಾರ್ಥಿಗಳನ್ನು ನಿಸರ್ಗಧಾಮದಿಂದ ಹೊರಗೆ ಕರೆದೊಯ್ಯುತ್ತಿದ್ದಾಗ ಹಿಂದೂ ಜಾಗರಣಾ ವೇದಿಕೆಯ ಸ್ಥಳೀಯ ಪ್ರಮುಖ ಕಾರ್ಯಕರ್ತ ಸಂಪತ್ ಶೆಟ್ಟಿ ಎಂಬಾತ ಪೊಲೀಸರ ಸಮ್ಮುಖವೇ ವಿದ್ಯಾರ್ಥಿನಿಯೊಬ್ಬಳ ಕುತ್ತಿಗೆಗೆ ಹಲ್ಲೆ ನಡೆಸಿದ. ಆದರೆ ಪೊಲೀಸರು ಗೂಂಡಾಗಿರಿ ನಡೆಸಿದ ದುಷ್ಕರ್ಮಿಗಳನ್ನು ವಶಕ್ಕೆ ಪಡೆಯಲು ಮುಂದಾಗಲಿಲ್ಲ. ಈ ಎಲ್ಲ ದೃಶ್ಯಾವಳಿಯನ್ನು ಯಾರೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ತಮ್ಮ ಸಮ್ಮುಖವೇ ಸಂಘ ಪರಿವಾರದ ಕಾರ್ಯಕರ್ತರು ವಿದ್ಯಾರ್ಥಿನಿಗೆ ಹಲ್ಲೆ ನಡೆಸಿದ್ದರೂ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದ ದೃಶ್ಯಾವಳಿಗೆ ವ್ಯಾಪಕ ಟೀಕೆ ವ್ಯಕ್ತವಾದ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ಎಚ್ಚೆತ್ತುಕೊಂಡು ಕೇಸು ದಾಖಲಿಸಿದ್ದಾರೆ.

ಕೇಸು ದಾಖಲು: ಹಲ್ಲೆಗೊಳಗಾದ ವಿದ್ಯಾರ್ಥಿನಿಯ ತಾಯಿ ಮೆಲ್ಸಿ ಸೆರಾವೋ ನೀಡಿದ ದೂರಿನಂತೆ ಪೊಲೀಸರು ಸೆ. 341, 342, 324, 506, 509, 355, 153(ಎ), 74 (1) ಅನ್ವಯ ಪ್ರಕರಣ ದಾಖಲಿಸಿಕೊಂಡು ಹಿಂಜಾವೇ ಕಾರ್ಯಕರ್ತರಾದ ಮೂಡುಶೆಡ್ಡೆಯ ಸಂಪತ್ ಶೆಟ್ಟಿ, ವರದ, ದಿನೇಶ್ ಎಂಬವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಂಪತ್ ಶೆಟ್ಟಿಯ ವಿರುದ್ಧ ಕಾವೂರು ಠಾಣೆಯಲ್ಲಿ ಈ ಹಿಂದೆ ಕೆಲವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೃಶ್ಯಾವಳಿ ಆಧರಿಸಿ ಕ್ರಮ: ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಘಟನೆಯ ದೃಶ್ಯಾವಳಿಯನ್ನು ಆಧರಿಸಿ ಈ ಕೃತ್ಯದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಡಿಸಿಪಿ ಹನುಮಂತರಾಯ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

ವ್ಯಾಪಕ ಆಕ್ರೋಶ: ಪಿಲಿಕುಳ ನಿಸರ್ಗಧಾಮದಲ್ಲಿ ವಿಹರಿಸಲು ಅಡ್ಡಿಪಡಿಸಿದ್ದಲ್ಲದೆ ಪೊಲೀಸರ ಸಮ್ಮುಖವೇ ಕಾನೂನನ್ನು ಕೈಗೆತ್ತಿಕೊಂಡ ಸಂಘ ಪರಿವಾರದ ಕಾರ್ಯಕರ್ತರ ಪುಂಡಾಟಿಕೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಘಟನೆಯ ದೃಶ್ಯಾವಳಿಯು ವೈರಲ್ ಆಗಿದ್ದು, ದ.ಕ.ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ಅಸಮಾಧಾನ ಕೇಳಿ ಬರುತ್ತಿದೆ.

ಇದು ಜಂಟಿ ಕಾರ್ಯಾಚರಣೆ
ಸಂಘ ಪರಿವಾರ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆ ಇದಾಗಿದೆ. ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಸಂಘಪರಿವಾರಕ್ಕೆ ಸಂಪೂರ್ಣವಾಗಿ ತಲೆಬಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ವೈರಲ್ ಆದ ವೀಡಿಯೋ ಅದಕ್ಕೆ ಸಾಕ್ಷಿಯಾಗಿದೆ. ಪಿಲಿಕುಳದಲ್ಲಿ ವಿಹರಿಸುತ್ತಿದ್ದವರಿಗೆ ಅಡ್ಡಿಪಡಿಸುತ್ತಿದ್ದ ಸಂಘ ಪರಿವಾರದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವ ಬದಲು ಪೊಲೀಸರು ತಮ್ಮ ಸಮ್ಮುಖವೇ ಹಲ್ಲೆ ನಡೆಸಲು ಅವಕಾಶ ಮಾಡಿಕೊಟ್ಟಿರುವುದು ಖಂಡನೀಯ. ಪೊಲೀಸ್ ಇಲಾಖೆ ಅಥವಾ ಕಾನೂನಿನ ಬಗ್ಗೆ ಸಂಘ ಪರಿವಾರದ ಕಾರ್ಯಕರ್ತರಿಗೆ ಗೌರವ ಅಥವಾ ಭಯ ಇದ್ದಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಮೊನ್ನೆ ಸುಬ್ರಹ್ಮಣ್ಯದಲ್ಲೂ ಇಂತದ್ದೇ ಘಟನೆ ನಡೆಯಿತು. ಚುನಾವಣೆ ಸಂದರ್ಭ ಪದೇ ಪದೇ ಇಂತಹ ಘಟನೆ ಯಾತಕ್ಕಾಗಿ ನಡೆಯುತ್ತಿದೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತು. ಜಿಲ್ಲಾಡಳಿತ ಸಹಿತ ರಾಜ್ಯ ಸರಕಾರ ಕೂಡ ಈ ಬಗ್ಗೆ ಕಠಿಣ ಕ್ರಮ ಜರಗಿಸಿದ್ದರೆ ಇದು ಮರುಕಳಿಸುತ್ತಿರಲಿಲ್ಲ. ಪಿಲಿಕುಳದಲ್ಲಿ ನಡೆದ ಘಟನೆಯನ್ನು ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಘಟನೆ ನಡೆದ ಸಂದರ್ಭ ಹಾಜರಿದ್ದ ಪೊಲೀಸರ ವೈಫಲ್ಯದ ವಿರುದ್ಧ ತನಿಖೆ ನಡೆಸಿ ಕ್ರಮ ಜರಗಿಸಬೇಕು.

-ವಿದ್ಯಾ ದಿನಕರ್, ಸಾಮಾಜಿಕ ಕಾರ್ಯಕರ್ತೆ, ಮಂಗಳೂರು

ಪೊಲೀಸ್ ಇಲಾಖೆ ತಲೆಬಾಗಿದೆ
ಜಿಲ್ಲೆಯಲ್ಲಿ ಸಂಘಪರಿವಾರಕ್ಕೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ತಲೆಬಾಗಿದೆ. ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆದರೂ ಏನೂ ಆಗಿಲ್ಲ ಎಂಬಂತೆ ವರ್ತಿಸಿ ಪ್ರಕರಣವನ್ನು ಲಘುವಾಗಿ ಪರಿಗಣಿಸಿರುವುದೇ ಇದಕ್ಕೆ ಸಾಕ್ಷಿ. ಗೂಂಡಾಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮಜರಗಿಸಲು ಸರಕಾರ, ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಸಂಘಟನೆಗಳು ಪೊಲೀಸ್ ಇಲಾಖೆಗೆ ನೈತಿಕ ಬೆಂಬಲ ನೀಡುವ ಅಗತ್ಯವೂ ಇದೆ. ಒಟ್ಟಿನಲ್ಲಿ ಮಂಗಳವಾರ ನಡೆದ ಘಟನೆ ಖಂಡನೀಯ. ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕಿದೆ.
-ದಿನೇಶ್ ಹೆಗ್ಡೆ ಉಳೆಪ್ಪಾಡಿ, ನ್ಯಾಯವಾದಿ ಮತ್ತು ಸಾಮಾಜಿಕ ಹೋರಾಟಗಾರರು, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News