ಶ್ರೀಕೃಷ್ಣ ಮಠದಿಂದ ಡಾ.ವೀರೇಂದ್ರ ಹೆಗ್ಗಡೆಗೆ ಅಭಿನಂದನೆ
ಉಡುಪಿ, ಜ.2: ಪರ್ಯಾಯ ಪೇಜಾವರ ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ 50 ವರ್ಷ ಪೂರೈಸಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನಾ ಸಮಾರಂಭವನ್ನು ಮಂಗಳವಾರ ಸಂಜೆ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.
ಡಾ.ಹೆಗ್ಗಡೆ ಅವರನ್ನು ಅಭಿನಂದಿಸಿದ ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ವೀರೇಂದ್ರ ಹೆಗ್ಗಡೆ ಮಾಡದ ಸತ್ಕಾರ ಇಲ್ಲ. ಶಿಕ್ಷಣ, ವೈದ್ಯಕೀಯ, ಅನ್ನದಾನ, ಯೋಗ, ನೈತಿಕತೆ, ಕೃಷಿ ಅಭಿವೃದ್ಧಿ, ದೇವಸ್ಥಾನಗಳ ಅಭಿವೃದ್ಧಿ ಸಹಿತ ಎಲ್ಲ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಧರ್ಮಾಧಿಕಾರಿಗಳು ಹೇಗೆ ಇರಬೇಕು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದರು.
ಧರ್ಮಸ್ಥಳಕ್ಕೆ ಸೀಮಿತವಾಗಿದ್ದ ಇವರ ಸೇವೆ ಇಂದು ಇಡೀ ಭಾರತಕ್ಕೆ ವ್ಯಾಪಿಸಿದೆ. ಆ ಮೂಲಕ ಇಡೀ ದೇಶವನ್ನೇ ಧರ್ಮಸ್ಥಳವನ್ನಾಗಿಸುವ ಕಾರ್ಯ ನಡೆ ಯುತ್ತಿದೆ. ಕರಾವಳಿಯ ಹೆಮ್ಮೆಯ ಪುತ್ರರಾಗಿರುವ ಇವರಿಗೆ ಭಾರತ ರತ್ನ ಪ್ರಶಸ್ತಿ ದೊರೆಯಲಿ ಎಂದು ಪೇಜಾವರಶ್ರೀ ಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ, 1969ರ ಬರಗಾಲದ ಸಂದರ್ಭದಲ್ಲಿ ಗುಲ್ಬರ್ಗದಲ್ಲಿ ಪೇಜಾವರ ಸ್ವಾಮೀಜಿಯ ಹಿಂಬಾಲಕನಾಗಿ ಹಳ್ಳಿಗಳಿಗೆ ತಿರುಗಿ ಬಡತನ, ಬರಗಾಲದ ಸ್ಥಿತಿ ನೋಡಿ ನನ್ನ ಮನ ಪರಿವರ್ತನೆಯಾಯಿತು. ಅನ್ನದಾನ, ಔಷಧದಾನ, ವಿದ್ಯಾದಾನ ಮತ್ತು ಅಭಯದಾನವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದ್ದೇವೆ. ಸೇವೆಗಿಂತ ಮಿಗಿಲಾದುದು ಇನ್ನೊಂದಿಲ್ಲ ಎಂದರು.
ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಬಿ.ಆಚಾರ್ಯ, ಜಿಲ್ಲಾ ಉಸ್ತು ವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಪ್ರೊ.ವೆಂಕಟನರ ಸಿಂಹಾಚಾರ್ಯ ಧಾರವಾಡ ಅಭಿನಂದನಾ ಭಾಷಣ ಮಾಡಿದರು.
ಹೇಮಾವತಿ ವಿ.ಹೆಗ್ಗಡೆ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದರು. ಮಾಜಿ ಶಾಸಕ ಕೆ.ರಘುಪತಿ ಭಟ್ ಸ್ವಾಗತಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
ಈಶಾನ್ಯ ರಾಜ್ಯಗಳ ಸ್ಥಿತಿ ದುಸ್ಥರ: ನಾಗಲ್ಯಾಂಡ್ ರಾಜ್ಯಪಾಲ
ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ಈಶಾನ್ಯದ 8 ರಾಜ್ಯಗಳ ಜನರ ಸ್ಥಿತಿ ಇನ್ನೂ ದುಸ್ಥರವಾಗಿದೆ. 200ಕ್ಕೂ ಅಧಿಕ ತೀವ್ರಗಾಮಿ ಗುಂಪುಗಳು ಸಕ್ರಿಯ ವಾಗಿವೆ. ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಚೀನಾ ಒಪ್ಪುತ್ತಿಲ್ಲ. ದೇಶದ ಸಮಗ್ರತೆಗೆ ಆ ರಾಜ್ಯಗಳಲ್ಲಿ ಸಾಕಷ್ಟು ಅಪಾಯ ಇದೆ ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ತಿಳಿಸಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ ಶೇ.5ರಷ್ಟು ಕ್ರಿಶ್ಚಿಯನ್ನರಿದ್ದರೂ ಅಲ್ಲಿರುವ 5 ವಿಶ್ವವಿದ್ಯಾ ನಿಲಯಗಳಲ್ಲಿ ಎರಡು ಕ್ರಿಶ್ಚಿಯನ್ ವಿ.ವಿಗಳಾಗಿವೆ. ಪ್ರತಿ ಕ್ಷೇತ್ರದಲ್ಲೂ ಅವರ ಸೇವೆ ಇದೆ. ಬುಡಕಟ್ಟು ಜನರನ್ನು ಮನುಷ್ಯರನ್ನಾಗಿ ಮಾಡಿದ್ದಾರೆ. ಆದರೆ ನಮ್ಮ ಸಂತರು ಯಾರು ಕೂಡ ಅಲ್ಲಿಗೆ ಬಂದಿಲ್ಲ. ಇಲ್ಲಿಯ ಸಂತ ಕೊಡುಗೆ ಈಶಾನ್ಯ ರಾಜ್ಯಗಳಿಗೆ ಬೇಕಾಗಿದೆ ಎಂದು ಅವರು ತಿಳಿಸಿದರು.