×
Ad

ದೇವಾಲಯಗಳು ದೇವರ ಅಸ್ತಿತ್ವ ತೋರುವ ತಾಣಗಳು: ಉಡುಪಿ ಬಿಷಪ್

Update: 2018-01-02 21:34 IST

ಶಿರ್ವ, ಜ.2: ದೇವಾಲಯಗಳು ದೇವರ ಅಸ್ತಿತ್ವವನ್ನು ತೋರಿಸುವ ತಾಣಗಳಾಗಿದ್ದು, ಅವುಗಳ ಪಾವಿತ್ರ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಶಿರ್ವ ಪಿಲಾರ್‌ನಲ್ಲಿ ನೂತನವಾಗಿ ನಿರ್ಮಿಸಿದ ಉಡುಪಿ ಧರ್ಮಪ್ರಾಂತದ ಮೊದಲ ಪಾಲಕ ಬಾಲ ಯೇಸುವಿಗೆ ಸಮರ್ಪಿಸಿದ ದೇವಾಲಯವನ್ನು ಮಂಗಳವಾರ ಉದ್ಘಾಟಿಸಿ ಅವರು, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ದೇವಾಲಯಗಳು ಮನುಷ್ಯ ಮತ್ತು ದೇವರ ನಡುವೆ ಸಂಬಂಧವನ್ನು ಬೆಸೆಯುವ ಕೊಂಡಿಗಳಾಗಿವೆ. ಮನಸ್ಸಿಗೆ ಆಧ್ಯಾತ್ಮಿಕ ಸಂತೋಷದೊಂದಿಗೆ ದೇವರ ಕೃಪಾವರಗಳನ್ನು ಪಡೆಯುವ ಪುಣ್ಯಸ್ಥಳಗಳಾಗಿವೆ. ಈ ಹೊಸ ಚರ್ಚ್ ಮೂಲಕ ಇಲ್ಲಿ ಸಮುದಾಯವನ್ನು ಕಟ್ಟುವ ಕೆಲಸ ನಡೆಯಬೇಕಾಗಿದೆ. ಇದರಿಂದ ನಾವೆಲ್ಲರೂ ಒಂದೇ ಎನ್ನುವ ಮನೋಭಾವದೊಂದಿಗೆ ಸೌಹಾರ್ದತೆ ಯಿಂದ ಬದಕಲು ಸಾಧ್ಯ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ, ದೇಶದಲ್ಲಿ ಶೇ.2ರಷ್ಟಿರುವ ಕ್ರೈಸ್ತರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಮೂಲಕ ದೇಶದ ಅಭಿವೃದ್ದಿಗೆ ಶೇ.20ರಷ್ಟು ಕೊಡುಗೆ ನೀಡಿದ್ದಾರೆ. ಇದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮಂಚೂಣಿಯಲ್ಲಿವೆ. ಸಮಾಜವನ್ನು ಸುಶಿಕ್ಷಿತ, ಶಿಸ್ತುಬದ್ದ ಹಾಗೂ ಆರೋಗ್ಯಭರಿತವಾಗಿ ರೂಪಿಸುವಲ್ಲಿ ಕ್ರೈಸ್ತ ಸಮುದಾಯದ ಪಾತ್ರ ಮಹತ್ವವಾದುದು ಎಂದರು.

ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ, ಉಡುಪಿ ಧರ್ಮಪ್ರಾಂತದ ಶ್ರೇಷ್ಠ ಧರ್ಮಗುರು ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಸಾಲೇಶಿಯನ್ ಸಭೆಯ ಕೊಂಕಣ್ ಗೋವಾ ಪಣಜಿ ಪ್ರೊವಿನ್ಸ್‌ನ ಪ್ರೊವಿನ್ಸಿಯಲ್ ವಂ.ಫೆಲಿಕ್ಸ್ ಫೆರ್ನಾಂಡಿಸ್, ಧರ್ಮಪ್ರಾಂತದ ಕುಲಪತಿ ವಂ.ವಲೇರಿಯನ್ ಮೆಂಡೊನ್ಸಾ ಶುಭ ಹಾರೈಸಿದರು.

ಇದಕ್ಕೂ ಮುನ್ನಾ ನೂತನ ಕಾಂಕ್ರಿಟ್ ರಸ್ತೆ, ಚರ್ಚಿನ ನೂತನ ಗೇಟ್, ಹೊಸ ಹೈಮಾಸ್ಟ್ ದೀಪ, ನೂತನ ಗುರು ನಿವಾಸ, ಗಂಟಾ ಗೋಪುರವನ್ನು ಉದ್ಘಾಟಿಸ ಲಾಯಿತು. ಜಿಪಂ ಸದಸ್ಯರಾದ ಶಿಲ್ಪಾ ಸುವರ್ಣ, ವಿಲ್ಸನ್ ರೊಡ್ರಿಗಸ್, ತಾಪಂ ಸದಸ್ಯ ಮೈಕಲ್ ರಮೇಶ್ ಡಿಸೋಜ, ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ, ಶಿರ್ವ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಕಾರ್ಯದರ್ಶಿ ಲೀನಾ ಮಚಾದೊ, ಆಯೋಗಗಳ ಅಧ್ಯಕ್ಷ ಮೆಲ್ವಿನ್ ಆರಾನ್ಹಾ, ಪಿಲಾರ್ ಚರ್ಚಿನ ಸಂಚಾಲಕ ವಲೇರಿಯನ್ ಮಚಾದೊ, ಶಿರ್ವ ಡೊನ್ ಬೊಸ್ಕೊ ಸೆಂಟರ್‌ನ ನಿರ್ದೇಶಕ ವಂ.ಕಿರಣ್ ನಜ್ರೆತ್ ಉಪಸ್ಥಿತರಿದ್ದರು.
ಶಿರ್ವ ಆರೋಗ್ಯ ಮಾತಾ ಇಗರ್ಜಿಯ ಧರ್ಮಗುರು ವಂ.ಸ್ಟ್ಯಾನಿ ತಾವ್ರೊ ಸ್ವಾಗತಿಸಿದರು. ವಿಲ್ಸನ್ ಮಚಾದೊ ಮತ್ತು ಎಮಿಲ್ಡಾ ಮಥಾಯಸ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News