×
Ad

ಉಡುಪಿ; ಹೆದ್ದಾರಿ ನಿಷೇಧಿತ ಪ್ರದೇಶದಲ್ಲಿ ಬಾರ್ ತೆರೆಯಲು ಯತ್ನ : ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

Update: 2018-01-02 22:41 IST

ಉಡುಪಿ, ಜ.2: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕರಾವಳಿ ಜಂಕ್ಷನ್ ಸಮೀಪದ ಆದಿಉಡುಪಿಯಲ್ಲಿರುವ ದುರ್ಗಾಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ಮದ್ಯದಂಗಡಿ ತೆರೆಯಲು ಹುನ್ನಾರ ನಡೆಸುತ್ತಿದ್ದು ಅಬಕಾರಿ ಇಲಾಖೆ ಕೂಡ ಬಾರ್ ಮಾಲಕರ ಜೊತೆ ಶಾಮೀಲಾಗಿ ಕಾನೂನುಬಾಹಿರವಾಗಿ ಬಾರ್‌ಗೆ ಅನುಮತಿ ನೀಡಿದೆ ಎಂದು ದಕ್ಷಿಣ ಕನ್ನಡ ಪದ್ಮಶಾಲಿ ಮಹಾಸಭಾ ಆರೋಪಿಸಿದೆ.

 ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆ ಹಾಗು ಪ್ರೌಢ ಶಾಲೆಯ ಎದುರಿಗೇ ಇರುವ ಕಟ್ಟಡದಲ್ಲಿ ಈ ಬಾರ್‌ಗೆ ಅನುಮತಿ ನೀಡಲಾಗಿದೆ. ಈ ಬಗ್ಗೆ ಮಹಾಸಭಾದ ಪದಾಧಿಕಾರಿಗಳು ಶಾಲೆಯ ಆಡಳಿತ ಮಂಡಳಿ ಹಾಗೂ ಸ್ಥಳೀಯರ ಜೊತೆ ಸಮಲೋಚಿಸಿ ಇಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ಗೆ ಮನವಿ ಸಲ್ಲಿಸಿದೆ.

ಈ ದೂರಿನ ಬಗ್ಗೆ ಸೂಕ್ತ ಪರಿಶೀಲನೆ ನಡೆಸುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಆದರೆ ಸ್ಥಳ ಪರಿಶೀಲನೆಗೆ ಬಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಬಾರ್ ಮಾಲಕರ ಜೊತೆ ಸೇರಿ ಸುಳ್ಳು ಮಾಹಿತಿಗಳನ್ನು ನೀಡಿ ಬಾರ್ ಸ್ಥಾಪನೆಯ ಕೆಲಸಗಳನ್ನು ಮುಂದುವರಿಯುವಂತೆ ನೋಡಿಕೊಂಡಿದ್ದಾರೆ ಎಂದು ಮಹಾಸಭಾ ಆರೋಪಿಸಿದೆ.

ಈ ಕಟ್ಟಡದ ಪಕ್ಕದಲ್ಲಿ ಪದ್ಮಶಾಲಿ ಸಮುದಾಯದ ಸುವರ್ಣ ಮಹೋತ್ಸವ ಭವನದಲ್ಲಿ ಶ್ರೀದೇವರಾಜ ಅರಸು ಹಿಂದುಳಿದ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯವಿದ್ದು ಅಲ್ಲಿರುವ ವಿದ್ಯಾರ್ಥಿನಿಯರಿಗೆ ಇದರಿಂದ ತೊಂದರೆಯಾಗಲಿದೆ ಎಂದು ಪದ್ಮಶಾಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಯರಾಮ ಶೆಟ್ಟಿಗಾರ್ ಮಣಿಪಾಲ ಹೇಳಿದ್ದಾರೆ.

 ಬಾರ್‌ಗೆ ಅನುಮತಿ ನೀಡುವುದನ್ನು ವಿರೋಧಿಸಿ ಪದ್ಮಶಾಲಿ ಮಹಾಸಭಾದ ನಿಯೋಗ ಇಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಅಧ್ಯಕ್ಷ ಪುರಂದರ ಡಿ ಶೆಟ್ಟಿಗಾರ್ ಕಿನ್ನಿಗೋಳಿ, ಮಹಾಸಭಾದ ಶಿವಾನಂದ ಶೆಟ್ಟಿಗಾರ್, ಪೀತಾಂಬರ ಶೆಟ್ಟಿಗಾರ್, ಭಾಸ್ಕರ ಶೆಟ್ಟಿಗಾರ್ ಕನ್ನರ್ಪಾಡಿ, ಅಶೋಕ್ ಶೆಟ್ಟಿಗಾರ್, ಅರುಣ್ ಶೆಟ್ಟಿಗಾರ್ ಮಣಿಪಾಲ, ಪರ್ಕಳ ಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಸುಕೇಶ್ ಶೆಟ್ಟಿಗಾರ್, ಸ್ಥಳೀಯರಾದ ಜಮೀರ್ ಅಹಮದ್, ಸುಧಾಕರ್ ಶೆಟ್ಟಿ, ಜಯಕರ್ ಶೆಟ್ಟಿ, ಜಗದೀಶ್, ಚಂದ್ರಕಾಂತ್, ಪ್ರೇಮ ಜಗದೀಶ್, ವಿನೋದ್ ಕುಮಾರ್, ಸರಸ್ವತಿ ಪ್ರವೀಣ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News