ವೈದ್ಯರ ಮುಷ್ಕರ: ಉಡುಪಿಯಲ್ಲಿ ಉತ್ತಮ ಸ್ಪಂದನೆ
ಉಡುಪಿ, ಜ.2: ಕೇಂದ್ರ ಸರಕಾರ ಸಂಸತ್‌ನಲ್ಲಿ ಮಂಡಿಸಲಿರುವ ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್‌ಗೆ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳ ಹೊರ ರೋಗಿ ವಿಭಾಗ ಇಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮುಚ್ಚಿತ್ತು. ಆದರೆ ಅನಿವಾರ್ಯ ಹಾಗೂ ತುರ್ತು ಚಿಕಿತ್ಸೆಗಳನ್ನು ನೀಡಲಾಗುತ್ತಿತ್ತು.
ಆದರೆ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಎಂದಿನಂತೆ ಲಭ್ಯವಿತ್ತು, ಓಪಿಡಿ ಸೇರಿದಂತೆ ಎಲ್ಲಾ ಸೇವೆಗಳು ಅಲ್ಲಿ ರೋಗಿಗಳಿಗೆ ಲಭ್ಯವಿದ್ದು, ಯಾವುದೇ ತೊಂದರೆ ಎದುರಾಗಲಿಲ್ಲ.
ಜಿಲ್ಲೆಯ ಸರಕಾರಿ ಆಸ್ಪತ್ರೆಗಳು, ಸಮುದಾಯ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಎಂದಿಗಿಂತ ಇಂದು ಹೊರರೋಗಿಗಳ ಸಂಖ್ಯೆಯಲ್ಲಿ ವೃದ್ಧಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಕುಂದಾಪುರ, ಕಾರ್ಕಳ ಹಾಗೂ ಉಡುಪಿಯ ಹೆಚ್ಚಿನೆಲ್ಲಾ ಆಸ್ಪತ್ರೆಗಳು ಓಪಿಡಿ ಸೇವೆಯನ್ನು ನಿಲ್ಲಿಸಿದ್ದವು ಎಂದು ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಡಾ.ವೈ.ಸುದರ್ಶನ ರಾವ್ ತಿಳಿಸಿದ್ದಾರೆ. ಐಎಂಎಯ ನಿಯೋಗವೊಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಅರ್ಪಿಸಿದೆ ಎಂದವರು ತಿಳಿಸಿದರು.
ಕೇಂದ್ರ ಸರಕಾರ ತರಲುದ್ದೇಶಿಸಿರುವ ಗೋಮುಖವ್ಯಾಘ್ರ ರೂಪಿ ಮಸೂದೆಯ ವಿರುದ್ಧ ವೈದ್ಯರು ನಡೆಸುವ ಕಾನೂನು ಹೋರಾಟಕ್ಕೆ ಸಾರ್ವಜನಿಕರು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.