ಅಮೆರಿಕ ತರಾಟೆ: ಮುಂದಿನ ಕ್ರಮಕ್ಕಾಗಿ ಪಾಕ್ ಪ್ರಧಾನಿಯಿಂದ ಸಂಪುಟ ಸಭೆ

Update: 2018-01-02 17:34 GMT

ಇಸ್ಲಾಮಾಬಾದ್, ಜ. 2: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆರೋಪಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಎರಡು ದಿನಗಳ ಅವಧಿಯಲ್ಲಿ ತನ್ನ ಸಚಿವ ಸಂಪುಟದ ಸದಸ್ಯರು ಮತ್ತು ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.

ಕಳೆದ 15 ವರ್ಷಗಳಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ‘ಮೂರ್ಖತನ’ದಿಂದ ಬಿಲಿಯಗಟ್ಟಲೆ ಡಾಲರ್ ಹಣವನ್ನು ನೀಡುತ್ತಾ ಬಂದಿದೆ ಹಾಗೂ ಇದಕ್ಕೆ ಪ್ರತಿಯಾಗಿ ಅಮೆರಿಕಕ್ಕೆ ಸಿಕ್ಕಿದ್ದು ‘ಸುಳ್ಳುಗಳು ಮತ್ತು ವಂಚನೆ ಮಾತ್ರ’ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಅಬ್ಬಾಸಿ ಮಂಗಳವಾರ ಕೇಂದ್ರ ಸಚಿವ ಸಂಪುಟದ ಸಭೆ ಕರೆಯಬಹುದು ಹಾಗೂ ಸಭೆಯು ರಾಷ್ಟ್ರೀಯ ಭದ್ರತೆಯ ಬಗ್ಗೆ ಚರ್ಚಿಸಬಹುದಾಗಿದೆ ಎಂದು ‘ರೇಡಿಯೊ ಪಾಕಿಸ್ತಾನ’ ವರದಿ ಮಾಡಿದೆ.

ಟ್ರಂಪ್ ಹೇಳಿಕೆಗಳ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು ಎಂಬುದಾಗಿ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.

 ಸಂಪುಟ ಸಭೆಯ ಬಳಿಕ, ಬುಧವಾರ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ)ಯ ಸಭೆ ನಡೆಯಲಿದೆ. ಎನ್‌ಎಸ್‌ಸಿ ಸಭೆಯ ಅಧ್ಯಕ್ಷತೆಯನ್ನು ಅಬ್ಬಾಸಿ ವಹಿಸುವರು ಹಾಗೂ ಸಭೆಯು ದೇಶ ಮತ್ತು ವಲಯದ ಭದ್ರತಾ ಸ್ಥಿತಿಗತಿಯ ಬಗ್ಗೆ ವಿವರವಾಗಿ ಚರ್ಚಿಸಲಿದೆ.

ಪಾಕಿಸ್ತಾನದ ವಿರುದ್ಧ ಅಮೆರಿಕದ ಅಧ್ಯಕ್ಷರು ನಡೆಸಿರುವ ತೀವ್ರ ವಾಗ್ದಾಳಿಯ ಹಿನ್ನೆಲೆಯಲ್ಲಿ, ಮುಂದಿನ ಕ್ರಮಗಳ ಬಗ್ಗೆ ಸಭೆಯು ಚರ್ಚಿಸುವುದು ಎಂದು ಅಬ್ಬಾಸಿಯ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News