“ನನ್ನನ್ನು ಗುಂಡ್ಯದ ಗುಂಡಿಗೆ ಎಸೆಯಲು ಪೊಲೀಸ್ ಸಿಬ್ಬಂದಿ ಯಾರೊಂದಿಗೋ ಹೇಳುವುದು ಕೇಳಿಸಿತ್ತು”
“ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ಬಾಂಬ್ ಹಾಕಲು ಬಂದ ಉಗ್ರಗಾಮಿ ಎಂದು ಸುಳ್ಳು ಕೇಸು ದಾಖಲಿಸುವುದಾಗಿ ಬೆದರಿಸಿದರು”
"ಠಾಣೆಯಲ್ಲಿ ಕೂಡಿ ಹಾಕಿ ನಗ್ನಗೊಳಿಸಿ, ಕರೆಂಟ್ ಶಾಕ್ ಕೊಟ್ಟು ಚಿತ್ರ ಹಿಂಸೆ ನೀಡಿದರು"
"ಅಮಾನತು ಸಾಲದು... ಪೊಲೀಸ್ ಇಲಾಖೆಯಿಂದಲೇ ವಜಾಗೊಳಿಸಲಿ"
ಮಂಗಳೂರು, ಜ.3:“ಮುಸ್ಲಿಮರಾದ ನಿಮಗೆ ಹಿಂದೂ ಹುಡುಗಿಯರೇ ಬೇಕು. ಅವಳನ್ನು ಪೊನ್ನಾನಿಗೆ ಕರೆದುಕೊಂಡು ಹೋಗಿ ಮತಾಂತರಿಸುವ ಉದ್ದೇಶ ನಿನ್ನದಲ್ವಾ?, ಬೀಫ್ ತಿನ್ನುವ ನಿಮ್ಮಂತವರನ್ನು ನಂಬಬಾರದು... ಹಾಗಂತ ಹೇಳುತ್ತಲೇ ಠಾಣೆಯ ಗೋದಾಮಿನಲ್ಲಿ ಅಕ್ರಮವಾಗಿ ಕೂಡಿ ಹಾಕಿ, ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿದರು. ಬಾಯಿಗೆ ಎರಡು ಸಾಕ್ಸ್ ತಳ್ಳಿದರು, ಪ್ಲಾಸ್ಟರ್ ಹಾಕಿದರು, ಹೊಡೆತಕ್ಕೆ 3 ಲಾಠಿ ಕೂಡ ತುಂಡಾಯಿತು. ಕರೆಂಟ್ ಶಾಕ್ ಕೊಟ್ಟು ಚಿತ್ರ ಹಿಂಸೆ ನೀಡಿದರು”…
ಡಿ.21ರಂದು ಸುಬ್ರಹ್ಮಣ್ಯ ಠಾಣೆಯ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಫರ್ವೀಝ್ ಯಾನೆ ಪಚ್ಚು ಬೆಳ್ಳಾರೆಯ ಮಾತಿದು.
“ಇಂತಹ ಚಿತ್ರಹಿಂಸೆ ಇನ್ಯಾರಿಗೂ ಆಗುವುದು ಬೇಡ. ಆ ಠಾಣೆಯಲ್ಲಿ ಇದ್ದದ್ದು ಪೊಲೀಸರೇ ಅಲ್ಲ… ಅವರು ಪೊಲೀಸ್ ಇಲಾಖೆಯಲ್ಲಿರಲು ಕೂಡ ಅನರ್ಹರು. ಅವರನ್ನು ಅಮಾನತುಗೊಳಿಸಿದರೆ ಸಾಲದು, ಪೊಲೀಸ್ ಇಲಾಖೆಯಿಂದಲೇ ವಜಾಗೊಳಿಸಬೇಕು. ಪ್ರಶಾಂತ್ಕುಮಾರ್, ಚಂದ್ರೇಗೌಡ, ಸಂಧ್ಯಾಮಣಿ, ಮೋಹನ್ ಹಾಗೂ ಇತರ 7 ಮಂದಿ ಪೊಲೀಸರಲ್ಲದೆ ಇಬ್ಬರು ರಿಕ್ಷಾ ಚಾಲಕರು ಕೂಡ ನನ್ನ ಮೇಲೆ ದೌರ್ಜನ್ಯ ಎಸಗಿದರು. ಚಿತ್ರಹಿಂಸೆ ನೀಡಿದರು. ಅವರೆಲ್ಲರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು” ಎಂದು ಫರ್ವೀಝ್ ಒತ್ತಾಯಿಸಿದರು.
ಬುಧವಾರ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, “ನಾನು ಪ್ರಾದೇಶಿಕ ಭಾಷೆಗಳಲ್ಲಿ ಆಲ್ಬಮ್ ನಿರ್ಮಿಸುತ್ತಿದ್ದೆ. ಕ್ರೀಡೆ ಮತ್ತಿತರ ಕಾರ್ಯಕ್ರಮಗಳ ನಿರೂಪಕನಾಗಿಯೂ ಕೆಲಸ ಮಾಡುತ್ತಿದ್ದೆ. ಕಳೆದ 2 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೇನೆ.ಹಾಗಾಗಿ ಹೆಚ್ಚಾಗಿ ಚೆನ್ನೈಯಲ್ಲೇ ಇರುತ್ತೇನೆ. ಮೈಸೂರು ಮೂಲದ ಚಿತ್ರನಟಿ ಮತ್ತು ನಾನು ಪರಿಚಿತರು. ಕೆಲವು ಚಿತ್ರಗಳಲ್ಲಿ ನಾವು ಒಟ್ಟಾಗಿ ನಟಿಸಿದ್ದೇವೆ. ‘ವೇರುವತುಲಿ’ ಚಿತ್ರದಲ್ಲಿ ನಾನು ನಾಯಕ ನಟ ಮತ್ತು ಆಕೆ ನಾಯಕಿ ನಟಿಯಾಗಿ ಅಭಿನಯಿಸಿದ್ದು, ಶೀಘ್ರದಲ್ಲೇ ಅದು ಬಿಡುಗಡೆಗೊಳ್ಳಲಿದೆ”.
“ಡಿ.20ರಂದು ಹರಕೆ ಸಲ್ಲಿಸುವುದಕ್ಕಾಗಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಬರುವುದಾಗಿ ಆ ನಟಿ ಹೇಳಿ ನನ್ನನ್ನು ಬರಲು ಹೇಳಿದ್ದರು. ನಮ್ಮ ಮಧ್ಯೆ ಯಾವುದೇ ಪ್ರೇಮ ಸಂಬಂಧವಿಲ್ಲ. ಊರಿಗೆ ಬರುವ ಅತಿಥಿಗೆ ಆತಿಥ್ಯ ನೀಡುವ ಸಲುವಾಗಿ ನಾನು ಆಕೆಯನ್ನು ಸುಬ್ರಹ್ಮಣ್ಯ ರೈಲುನಿಲ್ದಾಣದಿಂದ ದೇವಸ್ಥಾನಕ್ಕೆ ಕರೆದುಕೊಂಡು ಹೋದೆ. ಅಂದು ರಾತ್ರಿಯೇ ಆಕೆ ಊರಿಗೆ ಮರಳಲು ನಿರ್ಧರಿಸಿದ್ದರು. ಆದರೆ, ಪೂಜೆ ಮುಗಿಯದ ಕಾರಣ ಅಲ್ಲೇ ಉಳಕೊಳ್ಳಲು ನಿರ್ಧರಿಸಿದರು. ಆದರೆ, ಒಂಟಿ ಹೆಣ್ಣಿಗೆ ರೂಂ ನೀಡಲು ನಿರಾಕರಿಸಿದ ಕಾರಣ ನಾನೇ ದೇವಸ್ಥಾನದಆವರಣದಲ್ಲಿದ್ದ ವೃದ್ಧ ದಂಪತಿಯ ಬಳಿ, ‘ಈಕೆ ನಿಮ್ಮೊಂದಿಗೆ ಇರಲಿ’ ಎಂದು ಹೇಳಿ ನಾನು ರಾತ್ರಿಯೇ ಮನೆಗೆ ಮರಳಿದೆ”.
“ಮರುದಿನ ಮುಂಜಾನೆ ಸುಮಾರು 6:30ಕ್ಕೆ ಆಕೆಯ ಫೋನ್ ಕರೆ ಬಂತು. ಆಕೆಯ ಮಾತು ಸೋತಿತ್ತು. ದೇವಸ್ಥಾನದ ಕಡೆಗೆ ಬೇಗ ಬಾ ಎಂದು ಆಕೆ ಕರೆದಳು. ಅದರಂತೆ ಸುಮಾರು 10 ಗಂಟೆಗೆ ನಾನು ಅಲ್ಲಿಗೆ ಹೋದೆ. ಆದರೆ ಅಲ್ಲಿ ಆಕೆ ಕಾಣಲಿಲ್ಲ. ಹುಡುಕಾಡಿದೆ.ಪ್ರಯೋಜನವಾಗಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂತು. ಆಕೆಯನ್ನು ಹುಡುಕಾಡುತ್ತಾ ಇದ್ದಾಗ ರಿಕ್ಷಾವೊಂದು ನನ್ನ ಬಳಿ ಬಂತು ನಿಂತಿತು. ನನ್ನನ್ನು ವಿಚಾರಿಸಿ ‘ನಾವು ಪೊಲೀಸರು... ರಿಕ್ಷಾ ಹತ್ತು... ನೀನು ಹುಡುಕಾಡುವ ಹುಡುಗಿ ಠಾಣೆಯಲ್ಲಿದ್ದಾಳೆ’ ಎಂದರು.ಅವರು ಸಮವಸ್ತ್ರದಲ್ಲಿರಲಿಲ್ಲ. ಆದರೂ ಅವರ ಮಾತು ನಂಬಿ ರಿಕ್ಷಾ ಹತ್ತಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಠಾಣೆಗೆ ಕರೆದೊಯ್ದ ಅವರು ಗೋದಾಮಿಗೆ ತಳ್ಳಿದರು. ಮೊಬೈಲ್-ಪರ್ಸ್ ಕಿತ್ತುಕೊಂಡರು" ಎಂದು ಫರ್ವೀಝ್ ಆರೋಪಿಸಿದರು.
‘ನೀನು ಅವಳನ್ನು ಲವ್ ಮಾಡುತ್ತೀಯಾ?, ಪೊನ್ನಾನಿಗೆ ಕರೆದುಕೊಂಡುಹೋಗುತ್ತೀಯಾ?, ಇಸ್ಲಾಂ ಧರ್ಮಕ್ಕೆ ಸೇರಿಸುತ್ತೀಯಾ?, ಬೀಫ್ ತಿನ್ನುವ ನಿಮಗೆ ನಮ್ಮ ಹುಡುಗಿಯರೇ ಬೇಕಾ?, ನೀವು ಇಲ್ಲಿ ಇರಬಾದರು, ನಿಮ್ಮನ್ನೆಲ್ಲಾ ಪಾಕಿಸ್ತಾನಕ್ಕೆ ಅಟ್ಟಬೇಕು’ ಎಂದು ಹೇಳಿ ಸಂಧ್ಯಾರಾಣಿ ಸಹಿತ 8 ಮಂದಿ ಪೊಲೀಸರು ನನ್ನನ್ನು ವಿವಸ್ತ್ರಗೊಳಿಸಿ ಹಲ್ಲೆನಡೆಸಿದರು. ನೆಲಕ್ಕೆ ಕೆಡವಿ ತುಳಿದರು. ನೋವು ತಾಳಲಾರದೆ ಬೊಬ್ಬಿಟ್ಟೆ, ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆದೆ”.
“ಮನೆಯವರಿಗೆ ತಿಳಿಸಿ ಬಿಡಿ ಎಂದು ಕೈಮುಗಿದು ಕೇಳಿದೆ. ನಿನ್ನನ್ನು ಲಾಕಪ್‌ಗೆ ತಳ್ಳಿದ ವಿಷಯ ಇನ್‌ಸ್ಪೆಕ್ಟರ್‌ಗೇ ತಿಳಿಸಲಿಲ್ಲ. ಇನ್ನು ನಿನ್ನ ಮನೆಯವರಿಗೆ ತಿಳಿಸಲಿಕ್ಕುಂಟಾ? ಎಂದು ಕೇಳಿ ವ್ಯಂಗ್ಯವಾಡಿದರು. ನನ್ನ ಬೊಬ್ಬೆ ಹೊರಗೆ ಕೇಳಿಸದಂತೆ ಬಾಯಿಗೆ ಸಾಕ್ಸ್ ತಳ್ಳಿದರು,ಪ್ಲಾಸ್ಟರ್ ಹಾಕಿದರು. ಹೊಡೆತಕ್ಕೆ 3 ಲಾಠಿ ತುಂಡಾಯಿತು. ಅಷ್ಟಾದರೂ ಸಮಾಧಾನವಾಗಲಿಲ್ಲ. ಇಬ್ಬರು ರಿಕ್ಷಾ ಚಾಲಕರು ಹಾಗು ಅಂದು ಕರ್ತವ್ಯದಲ್ಲಿಲ್ಲದ ಮೂವರು ಪೊಲೀಸರು ಕೂಡ ಹಲ್ಲೆ ನಡೆಸಿದರು. ಅಷ್ಟೇ ಅಲ್ಲ, ಆಕೆಯನ್ನು ನನ್ನ ಬಳಿ ಕರೆತಂದು ನಾವಿಬ್ಬರು ಪ್ರೇಮಿಗಳುಎಂದು ಹೇಳಿಸಿದರು. ಆಕೆಯಿಂದಲೂ ನನಗೆ ಹೊಡೆಸಿದರು” ಎಂದು ಫರ್ವೀಝ್ ಆರೋಪಿಸಿದ್ದಾರೆ.
“ಸಂಜೆ ಬಿಟ್ಟು ಬಿಡುತ್ತೇವೆ. ಕರೆದುಕೊಂಡು ಹೋಗಿ ಗುಂಡ್ಯದ ಗುಂಡಿಯಲ್ಲಿ ಎಸೆದು ಬಿಡಿ ಎಂದು ಒಬ್ಬ ಪೊಲೀಸ್ ಮೊಬೈಲ್‌ನಲ್ಲಿ ಯಾರಲ್ಲೋ ಹೇಳುವುದು ಕೇಳಿಸಿತು. ಆ ಮಾತು ಕೇಳಿ ನಾನು ಅಧೀರನಾದೆ. ನನ್ನನ್ನು ಕೊಲ್ಲಬೇಡಿ ಎಂದು ಕೈ ಮುಗಿದೆ. ಸ್ವಲ್ಪ ಸಮಯದ ಬಳಿಕವಿಷಯ ರಟ್ಟಾಯಿತು. ಬಿಟ್ಟು ಬಿಡಲು ಆಗುವುದಿಲ್ಲ ಎಂದು ಅದೇ ಪೊಲೀಸ್ ಯಾರಲ್ಲೋ ಹೇಳುವುದು ಕೇಳಿಸಿತು”.
“ನಾವು ಹೊಡೆದದ್ದನ್ನು ನೀನು ಯಾರಲ್ಲೂ ಬಾಯಿ ಬಿಡಬಾರದು. ಬಾಯಿ ಬಿಟ್ಟರೆ ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ಬಾಂಬ್ ಹಾಕಲು ಬಂದ ಉಗ್ರಗಾಮಿ ಎಂದು ಬಿಂಬಿಸಿ ನಿನ್ನ ಮೇಲೆ ಕೇಸು ದಾಖಲಿಸುವುದಾಗಿ ಬೆದರಿಸಿದರು. ಅಂತೂ ರಾತ್ರಿ ಮನೆ ಸೇರಿದೆ. ಹೆದರಿ ಮೌನಕ್ಕೆ ಶರಣಾದೆ.ಹೊಡೆತದ ಗಾಯ ವಾಸಿಯಾಗಲು ಹಳ್ಳಿ ಮದ್ದು ಮಾಡಿದೆ”.
“ವಾರದ ಬಳಿಕ ದೌರ್ಜನ್ಯ ಎಸಗಿದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ನಮ್ಮಿಬ್ಬರ ಮಧ್ಯೆ ಲವ್ ಇದೆ ಅಂತ ಹೇಳಿದರೆ ಅವನನ್ನು ಬಿಟ್ಟು ಬಿಡುತ್ತೇವೆ ಎಂದು ಪೊಲೀಸರು ಒತ್ತಡ ಹಾಕಿದ್ದಕ್ಕೆ ತಾನು ಹಾಗೇ ಹೇಳಬೇಕಾಯಿತು ಎಂದು ಆಕೆ ಬಳಿಕಹೇಳಿದರು. ಅಲ್ಲದೆ ಸತ್ಯ ಸಂಗತಿ ಏನೆಂದು ಆಕೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಯಬಿಟ್ಟರು. ಅದರ ಆಧಾರದ ಮೇಲೆ ಜಿಲ್ಲಾ ಎಸ್ಪಿ ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಆದರೆ, ಅದು ಸಾಲದು. ಸೂಕ್ತ ತನಿಖೆ ನಡೆಸಬೇಕು. ದೌರ್ಜನ್ಯ ಎಸಗಿದಪೊಲೀಸರ ವಿರುದ್ಧ ಕ್ರಮ ಜರಗಿಸಬೇಕು. ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು” ಎಂದು ಫರ್ವೀಝ್ ಆಗ್ರಹಿಸಿದರು.
“ಮಂಗಳವಾರ ನನ್ನ ಸೊಂಟ, ಕಾಲಿನಲ್ಲಿ ವಿಪರೀತ ನೋವು ಕಾಣಿಸಿತ್ತು. ಅನಿವಾರ್ಯವಾಗಿ ರಾತ್ರಿಯೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ” ಎಂದು
ನುಡಿದ ಫರ್ವೀಝ್, “ತಪ್ಪಿತಸ್ಥ ಪೊಲೀಸರಿಗೆ ಶಿಕ್ಷೆ ಆದರೆ ಮಾತ್ರ ಸಮಾಧಾನ. ನನಗೆ ಅವರು ಅಷ್ಟೊಂದು ಚಿತ್ರಹಿಂಸೆನೀಡಿದ್ದಾರೆ” ಎಂದು ಅಳಲು ತೋಡಿಕೊಂಡರು.