ಕಾಟಿಪಳ್ಳದಲ್ಲಿ ಯುವಕನ ಹತ್ಯೆ ಪ್ರಕರಣ: ನಾಲ್ವರು ಪೊಲೀಸ್ ವಶಕ್ಕೆ
ಮಂಗಳೂರು, ಜ.3 ಕಾಟಿಪಳ್ಳ ವೃತ್ತದ ಬಳಿ ಯುವಕನೊಬ್ಬನನ್ನು ಹಾಡಹಗಲೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಕಾಟಿಪಳ್ಳ ಕೈಕಂಬದ ನಿವಾಸಿ ದೀಪಕ್ ರಾವ್ (22) ರನ್ನು ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ಬರ್ಬರವಾಗಿ ಹತ್ಯೆಗೈದಿತ್ತು.
ಜ.3ರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ದೀಪಕ್ ಅವರು ದ್ವಿಚಕ್ರ ವಾಹನದಲ್ಲಿ ಕೃಷ್ಣಾಪುರ-ಕಾಟಿಪಳ್ಳ ರಸ್ತೆಯಲ್ಲಿ ಹೋಗುತ್ತಿದ್ದರು. ಇದೇ ಸಂದರ್ಭ ಅವರನ್ನು ಕಾರೊಂದು ಹಿಂಬಾಲಿಸಿಕೊಂಡು ಬಂದಿದ್ದು, ಕಾಟಿಪಳ್ಳದ ಸಮೀಪ ಅವರ ವಾಹನವನ್ನು ತಡೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ದೀಪಕ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಅವರು ಅದಾಗಲೇ ಮೃತಪಟ್ಟಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ದುಷ್ಕರ್ಮಿಗಳು ಪರಾರಿಯಾಗುತ್ತಿದ್ದ ಕಾರನ್ನು ಹಿಂಬಾಲಿಸಿದೆ. ಮಿಜಾರಿನಲ್ಲಿ ಕಾರನ್ನು ಪತ್ತೆ ಹಚ್ಚಿದ ಪೊಲೀಸರು ಕಾರನ್ನು ಚೇಸ್ ಮಾಡಿ ಫೈರಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪೈಕಿ ಓರ್ವನ ಕಾಲಿಗೆ ಗುಂಡು ತಗುಲಿದ್ದು, ಕಾರಿನಲ್ಲಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.