ಕಲ್ಲಡ್ಕ: ಕೊಲೆ ಆರೋಪಿಗೆ ಚೂರಿ ಇರಿತ ಪ್ರಕರಣ; ಮೂವರ ಬಂಧನ
ಬಂಟ್ವಾಳ, ಜ. 3: ಕಳೆದ ತಿಂಗಳು ಕಲ್ಲಡ್ಕದಲ್ಲಿ ನಡೆದ ಕೊಲೆ ಆರೋಪಿಯೋರ್ವನಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಲ್ಲಡ್ಕದ ನಿವಾಸಿಗಳಾದ ಮುಹಮ್ಮದ್ ಇಕ್ಬಾಲ್, ನಿಝಾಮ್ ಹಾಗೂ ಪಾಣೆಮಂಗಳೂರಿನ ನಿವಾಸಿ ಮುಹಮ್ಮದ್ ಶರೀಫ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಕಲ್ಲಡ್ಕದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಕೇಶವ ಎಂಬಾತನಿಗೆ ಚೂರಿ ಇರಿದ ಪ್ರಕರಣದಲ್ಲಿ ಈ ಮೂವರು ಶಾಮೀಲಾಗಿದ್ದಾರೆ ಎಂಬ ಆರೋಪದಡಿ ಬಂಧಿಸಲಾಗಿದೆ. ಅಲ್ಲದೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕಲ್ಲಡ್ಕದ ನಿವಾಸಿ ಖಲೀಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಆತನ ಪಾತ್ರವಿಲ್ಲದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿತ್ತು.
ಘಟನೆಯ ಹಿನ್ನೆಲೆ
ಕರೋಪಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿದ್ದ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಅರೋಪಿಗಳ ಪೈಕಿ ಓರ್ವನಾದ ವೀರ ಕಂಬದ ಕೇಶವ ಎಂಬಾತನನ್ನು ಕಳೆದ ತಿಂಗಳು ಕಲ್ಲಡ್ಕದಲ್ಲಿ ಹೆಲ್ಮೆಟ್ ಧರಿಸಿದ್ದ ತಂಡವೊಂದು ಚೂರಿಯಿಂದ ಇರಿದು ಗಾಯಗೊಳಿಸಿತ್ತು. ಗಾಯಾಳು ಅಪಾಯದಿಂದ ಪಾರಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.