×
Ad

ದೀಪಕ್ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು: ಸಿ.ಟಿ.ರವಿ

Update: 2018-01-03 19:50 IST

ಮಂಗಳೂರು, ಜ. 3: ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ)ಗೆ ವಹಿಸಬೇಕು ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸುದ್ದಿಗೋಷ್ಠಿಯಲ್ಲಿಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ಮೃದು ತಾಲಿಬಾನ್ ನೀತಿಯನ್ನು ಅನುಸರಿಸುತ್ತಿದೆ. ಈ ನೀತಿಯಿಂದ 24 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಮೃತ ದೀಪಕ್ ರಾವ್ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಿ.ಟಿ.ರವಿ ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಜೂನ್ 1, 2015ರಂದು ರಾಜ್ಯ ಸರಕಾರ ಕೆಎಫ್‌ಡಿ, ಪಿಎಫ್‌ಐ ಮೇಲಿನ ಹಲವಾರು ಪ್ರಕರಣಗಳನ್ನು ವಾಪಾಸು ಪಡೆದು ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ, ಈ ರೀತಿಯ ಕಾಂಗ್ರೆಸ್ ನೀತಿಯಿಂದ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ ಎಂದು ಸಿ.ಟಿ.ರವಿ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಮಾದಕ ವಸ್ತುಗಳ ಮಾರಾಟದ ಕೇಂದ್ರವಾಗುತ್ತಿದೆ. ಜಿಲ್ಲೆಯಲ್ಲಿ ಈ ರೀತಿಯ ಕೊಲೆಯಾಗಲು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಹಿಂದುತ್ವದ ಗುತ್ತಿಗೆ ಪಡೆದಿದ್ದೀರಾ ಎನ್ನುವವರು ಯಾರೂ ದೀಪಕ್ ರಾವ್ ಕೊಲೆಯಾದ ಬಳಿಕ ಆತನ ಕುಟುಂಬವನ್ನು ಭೇಟಿ ಮಾಡಲಿಲ್ಲ ಎಂದು ಸಿ.ಟಿ ರವಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು,ಮಾಜಿ ಉಪ ಸಭಾಪತಿ ಯೋಗೀಶ್ ಭಟ್,ಮಾಜಿ ಸಚಿವ ಕೃಷ್ಣಾ ಜೆ. ಪಾಲೇಮಾರ್, ಬಿಜೆಪಿ ಮುಖಂಡರಾದ ನಿರ್ಮಲ್ ಸುರಾನಾ, ವೇದ ವ್ಯಾಸ ಕಾಮತ್, ಸಂಜಯ ಪ್ರಭು, ಬೃಜೇಶ್ ಚೌಟ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News