×
Ad

ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ, ದೌರ್ಜನ್ಯ ಪ್ರಕರಣ: ಗೃಹ ಸಚಿವರ ಮಧ್ಯಪ್ರವೇಶಕ್ಕೆ ಸಮಾನ ಮನಸ್ಕರ ಸಂಘಟನೆ ಆಗ್ರಹ

Update: 2018-01-03 20:45 IST

ಮಂಗಳೂರು, ಜ.3: ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಗೂಂಡಾಗಿರಿ ನಡೆಯುತ್ತಿದೆ. ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ರಾಜ್ಯದ ಗೃಹ ಸಚಿವರು ನೇರವಾಗಿ ಮಧ್ಯಪ್ರವೇಶ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಸಮಾನ ಮನಸ್ಕರ ಸಂಘಟನೆ ಆಗ್ರಹಿಸಿದೆ.

ಜಿಲ್ಲಾಡಳಿತ ವ್ಯಾಪ್ತಿಯಲ್ಲಿರುವ ಪಿಲಿಕುಳ ನಿಸರ್ಗ ಧಾಮದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಕ್ಕೆ ಕಾರಣರಾದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಈ ರೀತಿಯ ಘಟನೆ ಮುಂದೆ ಜಿಲ್ಲೆಯಲ್ಲಿ ಅಥವಾ ರಾಜ್ಯದಲ್ಲಿ ನಡೆಯದಂತೆ ಸೂಕ್ತ ಕ್ರಮವನ್ನು ಗೃಹ ಸಚಿವರೆ ಆಸಕ್ತಿವಹಿಸಿ ತೆಗದುಕೊಳ್ಳ ಬೇಕು ಎಂದು ಜಿಲ್ಲೆಯ ಸಮಾನ ಮನಸ್ಕರ ಸಂಘಟನೆ ಆಗ್ರಹಿಸಿದೆ.

ನಗರದ ವಲೆನ್ಸಿಯಾದ ರೋಶನಿ ನಿಲಯದಲ್ಲಿ ಇಂದು ನಡೆದ ಸಮಾನ ಮನಸ್ಕರ ಸಂಘಟನೆಯ ಸಭೆಯಲ್ಲಿ ಭಾಗವಹಿಸಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಗೃಹ ಸಚಿವರನ್ನು ಆಗ್ರಹಿಸಲು ತೀರ್ಮಾನಿಸಿದ್ದಾರೆ.

ಶಿಕ್ಷಣ, ಬ್ಯಾಕಿಂಗ್, ಉದ್ಯಮ ಶೀಲತೆ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಮಂಗಳೂರು ಕೆಲವು ವರ್ಷಗಳಿಂದ ಕ್ಷುಲ್ಲಕ ಕಾರಣಗಳಿಂದ, ಮತೀಯವಾದಿಗಳ ಗುಂಡಾಗಿರಿ ಯಿಂದ ಕುಖ್ಯಾತಿಯನ್ನು ಪಡೆದಿದೆ. ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಈ ರೀತಿಯ ಚಟುವಟಿಕೆಗಳು ಹೆಚ್ಚುತ್ತಿದೆ. ಕಾನೂನು ಬಾಹಿರವಾಗಿ ಪೊಲೀಸರ ಸಮ್ಮಖದಲ್ಲಿಯೇ ದೌರ್ಜನ್ಯ ನಡೆಸುತ್ತಿದ್ದಾರೆ. ಯುವತಿಯರನ್ನು, ವಿದ್ಯಾರ್ಥಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಥಳಿಸುವುದು, ದೌರ್ಜನ್ಯ ಎಸಗುವುದರೊಂದಿಗೆ ಮಾನವ ಉಲ್ಲಂಘನೆ ಮಾಡುತ್ತ ಜಿಲ್ಲೆಯಲ್ಲಿ ಭೀತಿಯ ವಾತವರಣ ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಕ್ಷಣೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಆದುದರಿಂದ ಈ ಬಗ್ಗೆ ರಾಜ್ಯದ ಗೃಹ ಸಚಿವರು ತಕ್ಷಣ ಮಧ್ಯಪ್ರವೇಶ ಮಾಡಿ ಜಿಲ್ಲೆಯ ಸಮಸ್ಯೆಯ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಸಮಾನ ಮನಸ್ಕರ ಸಂಘಟನೆಯ ಸದಸ್ಯರು ಸಂಚಾಲಕರಾದ ವಿದ್ಯಾದಿನಕರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News