ಕರಸೇವಕರನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಸಮಾನವಾಗಿ ಪರಿಗಣಿಸಿ: ಮೋದಿ,ಆದಿತ್ಯನಾಥ್ ಗೆ ಹಿಂದೂ ಸಂತರ ಆಗ್ರಹ

Update: 2018-01-03 15:40 GMT

ಹೊಸದಿಲ್ಲಿ,ಜ.3: ಶೀಘ್ರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿರುವ ಹಲವಾರು ಹಿಂದೂ ಧಾರ್ಮಿಕ ಮುಖಂಡರು, ಸರಕಾರವು ರಾಮ ಜನ್ಮಭೂಮಿ ಆಂದೋಲನದಲ್ಲಿ ಭಾಗವಹಿಸಿದ್ದ ಕರಸೇವಕರನ್ನು ಸ್ವಾಂತಂತ್ರ್ಯ ಹೋರಾಟಗಾರರಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಹೇಳಿದೆ. ಇದು ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಸರಕಾರಗಳ ಹೊಣೆಗಾರಿಕೆಯಾಗಿದೆ ಎಂದು ಡಿ.29ರಿಂದ ಜ.1ರವರೆಗೆ ಮುಂಬೈನ ಭಯಾಂದರ್‌ನಲ್ಲಿ ನಡೆದ ವೈಚಾರಿಕ ಮಹಾಕುಂಭದಲ್ಲಿ ಅಂಗೀಕರಿಸಲಾದ ನಿರ್ಣಯವು ಆಗ್ರಹಿಸಿದೆ. ಈ ಸಮಾವೇಶದಲ್ಲಿ ದೇಶಾದ್ಯಂತದಿಂದ ಆಗಮಿಸಿದ್ದ 50ಕ್ಕೂ ಅಧಿಕ ಮಹಾಮಂಡಲೇಶ್ವರರು ಭಾಗವಹಿಸಿದ್ದರು.

 ರಾಮ ಮಂದಿರವು 125 ಕೋಟಿ ಹಿಂದೂಗಳ ನಂಬಿಕೆಯ ವಿಷಯವಾಗಿರುವುದರಿಂದ ಅಯೋಧ್ಯೆಯಲ್ಲಿ ಶೀಘ್ರವೇ ಮಂದಿರವು ನಿರ್ಮಾಣಗೊಳ್ಳಬೇಕು ಎಂಬ ಇನ್ನೊಂದು ನಿರ್ಣಯವನ್ನೂ ಅಂಗೀಕರಿಸಲಾಗಿದೆ ಎಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಾಮಂಡಲೇಶ್ವರರೋರ್ವರು ತಿಳಿಸಿದರು.

ಅನಂತಶ್ರೀ ವಿಭೂಷಿತ ಮಹಾಮಂಡಲೇಶ್ವರ ಸ್ವಾಮಿ ಚಿದಂಬರಾನಂದ ಸರಸ್ವತಿ ಮಹಾರಾಜ ಅವರು ಆಯೋಜಿಸಿದ್ದ ಮಹಾಕುಂಭವು ದೇಶಾದ್ಯಂತ ಗೋಹತ್ಯೆಯನ್ನು ನಿಷೇಧಿಸಬೇಕು ಮತ್ತು ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಹಾಗೂ ಭಗವದ್ಗೀತೆಯನ್ನು ರಾಷ್ಟ್ರೀಯ ಸಾಹಿತ್ಯವನ್ನಾಗಿ ಘೋಷಿಸಬೇಕು ಎಂಬ ಇನ್ನೊಂದು ನಿರ್ಣಯವನ್ನೂ ಅಂಗೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News