ತ್ರಿವಳಿ ತಲಾಕ್ ಮಸೂದೆ: ಕಾಂಗ್ರೆಸ್ ಬೂಟಾಟಿಕೆ ಬಯಲಾಗಿದೆ ಎಂದ ಕೇಂದ್ರ ಸರಕಾರ

Update: 2018-01-03 16:39 GMT

ಹೊಸದಿಲ್ಲಿ, ಜ.3: ತ್ರಿವಳಿ ತಲಾಕ್ ಮಸೂದೆ ಕುರಿತು ಕೇಂದ್ರ ಸರಕಾರದ ವಿರುದ್ಧ ರಾಜ್ಯಸಭೆಯಲ್ಲಿ ಒಗ್ಗಟ್ಟಾಗಿರುವ ವಿಪಕ್ಷಗಳು ಈ ವಿಧೇಯಕವನ್ನು ಪರಿಶೀಲನೆಗಾಗಿ ಸಂಸತ್ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದವು. ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ವಿಪಕ್ಷಗಳು ಮತ್ತು ಬಿಜೆಪಿ ಮಧ್ಯೆ ವಾಕ್ಸಮರ ನಡೆದು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ತ್ರಿವಳಿ ತಲಾಕ್ ಅನ್ನು ಕಾನೂನುಬಾಹಿರಗೊಳಿಸಿ ತಪ್ಪಿತಸ್ಥರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿರುವ ಮಸೂದೆಗೆ ಕಳೆದ ವಾರ ಲೋಕಸಭೆಯಲ್ಲಿ ಅಂಗೀಕಾರ ದೊರಕಿತ್ತು. ಈ ಮಸೂದೆಯನ್ನು ರಾಜ್ಯಸಭೆಯ ಆಯ್ಕೆ ಸಮಿತಿಗೆ ಕಳುಹಿಸಿದರೆ ಅದನ್ನು ಶುಕ್ರವಾರದಂದು ಕೊನೆಯಾಗಲಿರುವ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲು ಸಾಧ್ಯವಾಗುವುದಿಲ್ಲ.

ಆದರೆ ಸರಕಾರ ಈ ಮಸೂದೆಯನ್ನು ಈ ಚಳಿಗಾಲದ ಅಧಿವೇಶನದಲ್ಲೇ ಅಂಗೀಕರಿಸಲು ಪ್ರಯತ್ನಿಸುತ್ತಿದ್ದು ವಿಪಕ್ಷಗಳಿಗೂ ಸಹಕಾರ ನೀಡುವಂತೆ ಮನವಿ ಮಾಡಿದೆ. ಇದೀಗ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಈ ಮಸೂದೆಯ ವಿರುದ್ಧ ಮಾತನಾಡಿರುವ ಕಾರಣ ಸರಕಾರ, ಇದು ಕಾಂಗ್ರೆಸ್‌ನ ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ಟೀಕಿಸಿದೆ.

ಸರ್ವೋಚ್ಛ ನ್ಯಾಯಾಲಯವು ತ್ರಿವಳಿ ತಲಾಕ್‌ಗೆ ನಿಷೇಧ ಹೇರಿದ ಹೊರತಾಗಿಯೂ ಈಗಲೂ ದೇಶದಲ್ಲಿ ತ್ರಿವಳಿ ತಲಾಕ್‌ಗಳ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಈ ವಿಧೇಯಕವನ್ನು ಪರಿಚಯಿಸುವ ವೇಳೆ ಕಾನೂನು ಸಚಿವರಾದ ರವಿಶಂಕರ ಪ್ರಸಾದ್ ತಿಳಿಸಿದ್ದರು.

ಈ ಬಗ್ಗೆ ಸಂಸತ್ ಹೊರಗೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಸಾದ್, ಕಾಂಗ್ರೆಸ್ ಮಾತುಕತೆಗೆ ಸಿದ್ಧವಿಲ್ಲ. ಅದು ಈ ಮಸೂದೆಯನ್ನು ಬಾಕಿ ಉಳಿಸಲು ನೋಡುತ್ತಿದೆ. ಇದು ಆ ಪಕ್ಷದ ಬೂಟಾಟಿಕೆಯನ್ನು, ದ್ವಂದ್ವ ಧೋರಣೆಯನ್ನು ಪ್ರದರ್ಶಿಸುತ್ತದೆ. ಇದು ನಿಜವಾಗಿಯೂ ಬೇಸರದ ವಿಷಯ ಎಂದು ತಿಳಿಸಿದ್ದಾರೆ. ತ್ರಿವಳಿ ತಲಾಕ್ ಮಸೂದೆಯನ್ನು ಅಂಗೀಕರಿಸುವುದು ಮಹಿಳೆಯರ ಘನತೆಯ ವಿಷಯವಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಈ ಮಸೂದೆಯನ್ನು ಪರಿಶೀಲಿಸಬೇಕು ಎಂಬ ಪಕ್ಷದ ನಿರ್ಣಯಕ್ಕೆ ಮತದಾನ ನಡೆಯಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿಯಿತು. ಕಾಂಗ್ರೆಸ್‌ನ ಈ ನಿರ್ಧಾರವನ್ನು ಎಡಪಂಥೀಯ ಪಕ್ಷಗಳು, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಬೆಂಬಲಿಸಿದವು. ಎಐಎಡಿಎಂಕೆ ಮತ್ತು ಬಿಜು ಜನತಾದಳ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಈ ವಿಷಯದಲ್ಲಿ ಬೆಂಬಲ ಘೋಷಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News