ಉಡುಪಿ: ಪಲಿಮಾರು ಸ್ವಾಮೀಜಿಗೆ ಪೌರ ಸನ್ಮಾನ
ಉಡುಪಿ, ಜ.3: ಈಗಾಗಲೇ ದಾಖಲೆಯ ಐದು ಪರ್ಯಾಯ ಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಿರುವ ನನ್ನ ಗುರುಗಳಾದ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ, ತನ್ನ ಆರನೇ ಪರ್ಯಾಯವೆಂಬಂತೆ ನನ್ನ ದ್ವಿತೀಯ ಪರ್ಯಾಯವನ್ನು ನಡೆಸಿಕೊಡಬೇಕು. ಅವರ ಮಾರ್ಗದರ್ಶನದಲ್ಲಿ ನನ್ನ ಈ ಪರ್ಯಾಯ ನಡೆಯಲಿದೆ ಎಂದು ಪಲಿಮಾರುನ ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀ ಹೇಳಿದ್ದಾರೆ.
ಜ.18ರಂದು ಎರಡನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಶ್ರೀಗಳು ತೀರ್ಥಯಾತ್ರೆ ಮುಗಿಸಿ ಇಂದು ಪುರಪ್ರವೇಶಿಸಿ, ಸಂಜೆ ರಥಬೀದಿಯ ಶ್ರೀಪರವಿದ್ಯಾ ಮಂಟಪದಲ್ಲಿ ನಗರಸಭೆ ವತಿಯಿಂದ ಹಾಗೂ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಲಾದ ಪೌರ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತಿದ್ದರು.
ಐದು ಬಾರಿ ಪರ್ಯಾಯ ಪೀಠವೇರಿರುವ ಪೇಜಾವರ ಶ್ರೀಗಳ ಕೈಯಿಂದ ಅಧಿಕಾರವನ್ನು ಸ್ವೀಕರಿಸುವ ಸೌಭಾಗ್ಯ ನಮ್ಮದಾಗಿದೆ. ಅವರು ವಿಶ್ವೇಶತೀರ್ಥ ರಲ್ಲಿ ಸಮಾಜದ ವಿಶೇಷ ತೀರ್ಥರು. ಶ್ರೀಕೃಷ್ಣನನ್ನು ಒಲಿಸಿಕೊಂಡವರು ಅವರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಶ್ರೀವಿಶ್ವೇಶತೀರ್ಥ ಶ್ರೀ ಮಾತನಾಡಿ, ಪಲಿಮಾರು ಶ್ರೀಗಳನ್ನು ಪೂರ್ವಾಶ್ರಮದ ದಿನದಿಂದಲೇ ನೋಡುತಿದ್ದು, ಸನ್ಯಾಸತ್ವ ಸ್ವೀಕರಿಸಿದ ಬಳಿಕ ಪ್ರತಿ ಕ್ಷೇತ್ರದಲ್ಲೂ ಅವರ ಸಾಧನೆ ಅದ್ಭುತ. ಅದಮ್ಯ ಉತ್ಸಾಹದ, ಸದಾ ಹಸನ್ಮುಖಿಯಾಗಿರುವ ಪಲಿಮಾರು ಶ್ರೀಗಳು ದೇಶಾದ್ಯಂತ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಂಥ ಸಾಧಕರಿಗೆ ಪರ್ಯಾಯದ ಅಧಿಕಾರ ಹಸ್ತಾಂತರಿಸುವುದು ನಮ್ಮ ಸೌಭಾಗ್ಯ ಎಂದರು.
ಶ್ರೀಗಳಿಗೆ ನಗರಸಭೆಯ ವತಿಯಿಂದ ಪೌರ ಸನ್ಮಾನ ನಡೆಯಿತು. ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾಯುಕ್ತ ಡಿ.ಮಂಜುನಾಥಯ್ಯ ಅವರು ಸ್ವಾಮೀಜಿಯವರಿಗೆ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಸನ್ಮಾನ ಪತ್ರ ಅರ್ಪಿಸಿದರು. ಇದೇ ವೇಳೆ ಪಲಿಮಾರು ಶ್ರೀಗಳ ಕೋರಿಕೆಯಂತೆ ಕಲ್ಸಂಕ ಸರ್ಕಲ್‌ಗೆ ಶ್ರೀಕೃಷ್ಣ ಮಠದ ಸ್ಥಾಪಕ ಮಧ್ವಾಚಾರ್ಯರ ಹೆಸರನ್ನಿಡುವ ಬಗ್ಗೆ ಘೋಷಣೆಯನ್ನೂ ಮಾಡಲಾಯಿತು.
ಮಂಗಳೂರಿನ ಕಲ್ಕೂರ ಸಂಸ್ಥೆ ಹೊರತಂದ ಅಂಚೆ ಕವರ್ ಹಾಗೂ ಚೀಟಿಯ ಬಿಡುಗಡೆ ನಡೆಯಿತು. ಪೇಜಾವರ ಶ್ರೀಗಳು ಪಂಚಾಂಗವನ್ನು ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀ, ಪ್ರಯಾಗ ಮಠದ ಶ್ರೀ ವಿದ್ಯಾತ್ಮತೀರ್ಥ ಶ್ರೀ, ಬದರೀನಾಥದ ರಾವಲ್‌ಜೀ ಈಶ್ವರ ಪ್ರಸಾದ್ ನಂಬೂದರಿ, ಕಾಪು ಶಾಸಕ ವಿನಯಕುಮಾರ್ ಸೊರಕೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಉದ್ಯಮಿ ಡಾ.ಜಿ.ಶಂಕರ್, ಡಾ.ಎಂ.ಮೋಹನ್ ಆಳ್ವ ಉಪಸ್ಥಿತರಿದ್ದರು.
ಪರ್ಯಾಯ ಸ್ವಾಗತಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರೆ, ಎ. ಹರಿದಾಸ್ ಭಟ್ ಅಭಿನಂದನಾ ಭಾಷಣ ಮಾಡಿದರು.
ಡಿ.ಮಂಜುನಾಥಯ್ಯ ಮತ್ತು ಪದ್ಮನಾಭ ಭಟ್ ಮಾನಪತ್ರ ವಾಚಿಸಿದರು. ಮಟ್ಟು ಲಕ್ಷ್ಮಿನಾರಾಯಣ ರಾವ್ ವಂದಿಸಿದರೆ, ಪ್ರೊ.ಎಂ.ಎಲ್.ಸಾಮಗ ಕಾರ್ಯಕ್ರಮ ನಿರೂಪಿಸಿದರು.