×
Ad

ಉಗ್ರ ನಿಗ್ರಹದಲ್ಲಿ ಪಾಕ್ ಏನು ಮಾಡಬೇಕು?

Update: 2018-01-03 23:03 IST

ವಾಶಿಂಗ್ಟನ್, ಜ. 3: ಅಮೆರಿಕದ ನೆರವಿಗೆ ಪ್ರತಿಯಾಗಿ, ಭಯೋತ್ಪಾದನೆ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪಾಕಿಸ್ತಾನ ತೆಗೆದುಕೊಳ್ಳಬೇಕೆಂದು ತಾನು ಬಯಸುವ ‘ನಿರ್ದಿಷ್ಟ ಕಾರ್ಯಗಳ’ ವಿವರಗಳನ್ನು ಶೀಘ್ರವೇ ನೀಡುವುದಾಗಿ ಶ್ವೇತಭವನ ಹೇಳಿದೆ.

ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿರುವ ಪಾಕಿಸ್ತಾನಕ್ಕೆ ನೀಡಬೇಕಾಗಿರುವ 255 ಮಿಲಿಯ ಡಾಲರ್ (1620 ಕೋಟಿ ರೂಪಾಯಿ) ಸೇನಾ ನೆರವನ್ನು ತಾನು ತಡೆಹಿಡಿಯುತ್ತಿರುವುದಾಗಿ ಅಮೆರಿಕ ಕಳೆದ ವಾರ ತಿಳಿಸಿರುವುದನ್ನು ಸ್ಮರಿಸಬಹುದಾಗಿದೆ.

ಇದಾದ ಬಳಿಕ, ಪಾಕಿಸ್ತಾನಕ್ಕೆ ನೀಡುವ ಎಲ್ಲ ನೆರವನ್ನು ನಿಲ್ಲಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. ‘‘ಅಮೆರಿಕ ಈಗಾಗಲೇ 15 ವರ್ಷಗಳ ಅವಧಿಯಲ್ಲಿ 33 ಬಿಲಿಯ ಡಾಲರ್ (2.09 ಲಕ್ಷ ರೂಪಾಯಿ) ನೆರವು ನೀಡಿದೆ. ಆದರೆ, ಅದಕ್ಕೆ ಪ್ರತಿಯಾಗಿ ಅಮೆರಿಕಕ್ಕೆ ಪಾಕಿಸ್ತಾನದಿಂದ ಸಿಕ್ಕಿದ್ದು ಸುಳ್ಳುಗಳು ಮತ್ತು ವಂಚನೆ ಮಾತ್ರ’’ ಎಂಬುದಾಗಿ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

‘‘ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಹೆಚ್ಚಿನದನ್ನು ಮಾಡಬಹುದಾಗಿದೆ ಎನ್ನುವುದು ನಮಗೆ ಗೊತ್ತಿದೆ. ಈ ವಿಷಯದಲ್ಲಿ ಅವರು ಹೆಚ್ಚಿನದನ್ನು ಮಾಡಬೇಕು ಎಂದು ನಾವು ಬಯಸುತ್ತೇವೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಪಾಕಿಸ್ತಾನ ನಿರ್ದಿಷ್ಟವಾಗಿ ಏನು ಮಾಡಬೇಕು ಎಂಬ ಬಗ್ಗೆ ಮುಂದಿನ 24ರಿಂದ 48 ಗಂಟೆಗಳ ಅವಧಿಯಲ್ಲಿ ಹೆಚ್ಚಿನ ವಿವರಗಳು ಹೊರಬರುವುದನ್ನು ನೀವು ನೋಡಲಿದ್ದೀರಿ’’ ಎಂದರು.

ಅದೇ ವೇಳೆ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್, ‘‘ವಿದೇಶಿ ಸೇನಾ ನೆರವಿನ ರೂಪದಲ್ಲಿ ನಾವು ಹಿಂದೆ ನೀಡಿದ ಹಣವನ್ನು ಅವರು ಗಳಿಸಬೇಕಾದರೆ, ಭಯೋತ್ಪಾದಕರ ವಿರುದ್ಧದ ದಮನ ಕಾರ್ಯಾಚರಣೆಯಲ್ಲಿ ತಾವು ಪ್ರಾಮಾಣಿಕರಾಗಿದ್ದೇವೆ ಎನ್ನುವುದನ್ನು ಅವರು ತೋರಿಸಬೇಕು’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News