ಕೊಟ್ಟಾರ ಚೌಕಿಯಲ್ಲಿ ವ್ಯಕ್ತಿಯ ಮೇಲೆ ಮಾರಕಾಯುಧದಿಂದ ದಾಳಿ
ಮಂಗಳೂರು, ಜ. 3: ಇಲ್ಲಿನ ಕೊಟ್ಟಾರ ಚೌಕಿ ಬಳಿ ವ್ಯಕ್ತಿಯೊಬ್ಬರ ಮೇಲೆ ಬರ್ಬರ ದಾಳಿ ನಡೆದಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಆಕಾಶಭವನ ನಿವಾಸಿ ಬಶೀರ್ (47) ಎಂದು ಗುರುತಿಸಲಾಗಿದೆ. ಬಶೀರ್ ಅವರು ಅಂಗಡಿಯನ್ನು ಮುಚ್ಚಿ ಮನೆಗೆ ವಾಪಸ್ ಹೋಗುವ ಸಂದರ್ಭ ಈ ದಾಳಿ ನಡೆದಿದೆ ಎಂದು ಬಶೀರ್ ಕುಟುಂಬದ ಮೂಲಗಳು ತಿಳಿಸಿವೆ.
ಆಂಬ್ಯುಲೆನ್ಸ್ ಒಂದರ ಚಾಲಕರಾದ ರೋಹಿತ್ ಮತ್ತು ಶೇಖರ್ ಅವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿರುವಾಗ ಕೊಟ್ಟಾರ ಚೌಕಿ ಬಳಿ ವ್ಯಕ್ತಿಯೊಬ್ಬರು ಬಿದ್ದುಕೊಂಡಿರುವುದನ್ನು ನೋಡಿದ್ದಾರೆ. ಹತ್ತಿರ ಹೋಗಿ ನೋಡುವಾಗ ಬರ್ಬರವಾಗಿ ಕಡಿದು ಹಾಕಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ರೋಹಿತ್ ಮತ್ತು ಶೇಖರ್ ಅವರು ಬಶೀರ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಶೀರ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಲಾಗಿದೆ.