ಐಪಿಎಲ್: ಚೆನ್ನೈ, ಆರ್‌ಸಿಬಿಯಲ್ಲಿ ಸ್ಥಾನ ಉಳಿಸಿಕೊಳ್ಳಲಿರುವ ಧೋನಿ, ಕೊಹ್ಲಿ

Update: 2018-01-03 18:56 GMT

ಮುಂಬೈ, ಜ.3: ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಅವರಂತಹ ಅಗ್ರ ಆಟಗಾರರು ಐಪಿಎಲ್ ಫ್ರಾಂಚೈಸಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ಗಳಲ್ಲಿ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಗುರುವಾರ ಬಿಸಿಸಿಐ ಬಿಡುಗಡೆಗೊಳಿಸಲಿದೆ.

 ಕೊಹ್ಲಿ ಭಾರತ ತಂಡದಲ್ಲಿ ಭಾರೀ ಯಶಸ್ಸು ಕಂಡಿದ್ದರೂ ಐಪಿಎಲ್ ತಂಡದ ನಾಯಕನಾಗಿ ಇನ್ನೂ ಟ್ರೋಫಿ ಜಯಿಸಿಲ್ಲ. ಐಪಿಎಲ್ ತಂಡದಲ್ಲಿ ಸ್ಥಾನಭದ್ರಪಡಿಸಿಕೊಂಡಿರುವ ಭಾರತದ ಇನ್ನೋರ್ವ ಬ್ಯಾಟ್ಸ್‌ಮನ್ ರೋಹಿತ್ ಶರ್ಮ. ರೋಹಿತ್ ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಟ್ರೋಫಿ ಜಯಿಸಲು ತಂಡಕ್ಕೆ ನೆರವಾಗಿದ್ದರು.ಕಳೆದ ಎರಡು ವರ್ಷಗಳ ಕಾಲ ಗುಜರಾತ್ ಲಯನ್ಸ್ ತಂಡದಲ್ಲಿ ಆಡಿರುವ ರವೀಂದ್ರ ಜಡೇಜ ಚೆನ್ನೈ ತಂಡಕ್ಕೆ ವಾಪಸಾಗುವ ಸಾಧ್ಯತೆಯಿದೆ. ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ದೃಢಪಟ್ಟಿದೆ.

ರಾಜಸ್ಥಾನ ರಾಯಲ್ಸ್ ತಂಡ 2 ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ವಾಪಸಾಗಲು ಸಜ್ಜಾಗಿದ್ದು, ಈ ತಂಡ ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಬಯಸಿದೆ.

 ಡಿ.6 ರಂದು ಹೊಸದಿಲ್ಲಿಯಲ್ಲಿ ನಡೆದ ಐಪಿಎಲ್ ಸಾಮಾನ್ಯ ಸಭೆಯಲ್ಲಿ ಪ್ರತಿ ತಂಡಗಳು ಐವರು ಆಟಗಾರರನ್ನು ಉಳಿಸಿಕೊಳ್ಳಬಹುದೆಂದು ನಿರ್ಧರಿಸಲಾಗಿತ್ತು. ಪ್ರತಿ ತಂಡಗಳು ಗರಿಷ್ಠ 25 ಆಟಗಾರರು(8 ವಿದೇಶಿ ಆಟಗಾರರು) ಹಾಗೂ ಕನಿಷ್ಠ 18 ಆಟಗಾರರನ್ನು ಹೊಂದಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News