ಕರಾವಳಿ ಸೌಹಾರ್ದ ಸಮಾವೇಶ ಮುಂದೂಡಿಕೆ: ಜೆಡಿಎಸ್
ಮಂಗಳೂರು, ಜ.4: ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಜ. 9ರಂದು ಜೆಡಿಎಸ್ ನಡೆಸಲಿರುವ ಕರಾವಳಿ ಸೌಹಾರ್ದ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಅವರು ತಿಳಿಸಿದ್ದಾರೆ.
ಗುರುವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಡೆಸುವ ಕರಾವಳಿ ಸೌಹಾರ್ದ ಸಮಾವೇಶದ ಅಂತಿಮ ಸಿದ್ಧತೆಗಳು ನಡೆದಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಡೆದ ಕೊಲೆ ಹಾಗೂ ಕೊಲೆಯತ್ನದಿಂದ ಮತ್ತೊಮ್ಮೆ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಕರಾವಳಿ ಸೌಹಾರ್ದ ಸಮಾವೇಶಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪಕ್ಷದ ಕಾರ್ಯಕರ್ತರು ಆಗಮಿಸಲಿದ್ದಾರೆ. ಆದ್ದರಿಂದ ಯಾವುದೇ ತೊಂದರೆಯಾಗದಂತೆ ಜ. 9ರಂದು ನಡೆಯಲಿರುವ ಸಮಾವೇಶವನ್ನು ಮುಂದಿನ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸುರತ್ಕಲ್ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಅನಿವಾರ್ಯತೆ ಇದೆ. ಹಾಗಾಗಿ ನಮ್ಮ ಉದ್ದೇಶಿತ ಸಾಮರಸ್ಯ ಸಮಾವೇಶವನ್ನು ಮುಂದೂಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅದರಂತೆ ಸಮಾವೇಶವನ್ನು ಮುಂದೂಡಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಮರನಾಥ ಶೆಟ್ಟಿ ತಿಳಿಸಿದರು.
ಸಮಾವೇಶಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿತ್ತು. ಪ್ರತಿ ತಾಲೂಕುಗಳಲ್ಲಿ ಬ್ಯಾನರ್, ಸಮಾವೇಶ ನಡೆಸಲು ಪೊಲೀಸ್ ಇಲಾಖೆಯ ಅನುಮತಿಯನ್ನೂ ಕೋರಲಾಗಿತ್ತು. ಜನತೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಕೊನೆಕ್ಷಣದಲ್ಲಿ ಸಮಾವೇಶವನ್ನು ಮುಂದೂಡುವ ತೀರ್ಮಾನಕ್ಕೆ ಬರಲಾಯಿತು ಎಂದವರು ಹೇಳಿದರು.
ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ವರಿಷ್ಠ ದೇವೇಗೌಡ ಅವರಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಕೆಲವೇ ದಿನಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಗೆ ಆಗಮಿಸಿದ ವೇಳೆ ಸಮಾವೇಶ ಸಿದ್ಧತೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಕೆ ಅಬ್ದುಲ್ ಖಾದರ್, ಜೆಡಿಎಸ್ ಯುವ ವಿಭಾಗದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ರತೀಶ್ ಕರ್ಕೇರ, ಪ್ರವೀಣ್ ಚಂದ್ರ ಜೈನ್ ಉಪಸ್ಥಿತರಿದ್ದರು.
ದೀಪಕ್ ರಾವ್ ಕೊಲೆಗೆ ಸರಕಾರದ ಆಡಳಿತ ವೈಫಲ್ಯ ಕಾರಣ
ಬುಧವಾರ ಹತ್ಯೆಯಾದ ದೀಪಕ್ ರಾವ್ ಕೊಲೆಗೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಜಿಲ್ಲೆಯು ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯದಂತೆ ಗೂಂಡಾ ರಾಜ್ಯವಾಗಿದೆ. ಇಂತಹ ಸರಣಿ ಕೊಲೆಗಳನ್ನು ನಿಯಂತ್ರಿಸಲಾಗದ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಮಂತ್ರಿಗಳು ರಾಜೀನಾಮೆ ನೀಡಿ ಮನೆಗೆ ಹೊಗಲಿ ಎಂದು ಮುಹಮ್ಮದ್ ಕುಂಞಿ ಆಕ್ರೋಶ ವ್ಯಕ್ತಪಡಿಸಿದರು.