ಸಂವಿಧಾನ ವಿರುದ್ಧದ ಹೇಳಿಕೆಗೆ ಖಂಡನೆ: ಜ.8ರಂದು ಬಿ.ಸಿ.ರೋಡ್‌ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಬಂಟ್ವಾಳ, ಜ. 4: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಸಂವಿಧಾನ ಹಾಗೂ ಅಂಬೇಡ್ಕರ್ ಕುರಿತು ಹೇಳಿಕೆ ನೀಡಿರುವ ವಿರುದ್ಧ ಬಿ.ಸಿ.ರೋಡ್ ತಾಲೂಕು ಕಚೇರಿ ಮುಂಭಾಗ ಜ. 8ರಂದು ಬೆಳಗ್ಗೆ 10.30ಕ್ಕೆ ದ.ಕ.ಜಿಲ್ಲಾ ಶಾಖೆ ಕರ್ನಾಟಕ ರಾಜ್ಯ ದಲಿತ್ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ದಲಿತ್ ಮಹಾಸಭಾದ ಮುಖಂಡ ಭಾನುಚಂದ್ರ ಕೃಷ್ಣಾಪುರ ಹೇಳಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕೇವಲ ಲೋಕಸಭೆಯಲ್ಲಿ ಕ್ಷಮೆ ಕೇಳಿದರೆ ಸಾಲದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಪಕ್ಷವೇ ಅವರನ್ನು ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.
ಇದು ಕೇವಲ ಪೇಜಾವರ ಶ್ರೀ ಅಥವಾ ಅನಂತ ಕುಮಾರ್ ಹೆಗಡೆ ಅವರ ಮಾತಲ್ಲ. ಇದು ಮನುಧರ್ಮದ ಮನಸ್ಥಿತಿಯ ಪ್ರಾತಿನಿಧ್ಯ ಎಂದು ಆರೋಪಿಸಿದ ಮುಖಂಡರು, ಸಂವಿಧಾನವೆನ್ನುವುದು ಪವಿತ್ರ ಗ್ರಂಥ. ಇದನ್ನು ಮನುವಾದಿಗಳ ಆಕ್ರಮಣದಿಂದ ನಾವೆಲ್ಲ ಸೇರಿ ಕಾಪಾಡಬೇಕಾಗಿದೆ. ಈ ದೇಶವನ್ನು ಪ್ರೀತಿಸುವವರು, ಸಂವಿಧಾನವನ್ನು ಗೌರವಿಸುವವರು, ಜಾತ್ಯಾತೀತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಈ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದಲಿತ ಮುಖಂಡರಾದ ಚೆನ್ನಪ್ಪ, ಮೋಹನ ಪಲ್ಲಮಜಲು, ರಾಜ ಪಲ್ಲಮಜಲು, ಜನಾರ್ದನ ಚಂಡ್ತಿಮಾರ್ ಮತ್ತು ಎಸ್‌ಡಿಪಿಐ ಮುಖಂಡ ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.