ಕಲ್ಲಡ್ಕ ಚೂರಿ ಇರಿತ ಪ್ರಕರಣದಲ್ಲಿ ಅಮಾಯಕರ ಬಂಧನ: ಎಸ್‌ಡಿಪಿಐ ಆರೋಪ
ಬಂಟ್ವಾಳ, ಜ. 4: ಕಳೆದ ತಿಂಗಳು ಕಲ್ಲಡ್ಕದಲ್ಲಿ ಕೇಶವ ಎಂಬಾತನ ಚೂರಿ ಇರಿದು ಕೊಲೆಯತ್ನ ಪ್ರಕರಣದಲ್ಲಿ ಪೊಲೀಸರು ಮೂವರು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಎಸ್‌ಡಿಪಿಐ ಸದಸ್ಯ ಮುನೀಶ್ ಅಲಿ ಆರೋಪಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳು ಸಿಗದಿದ್ದಾಗ ಪಾಣೆಮಂಗಳೂರಿನ ನೌಫಾಲ್, ಕಲ್ಲಡ್ಕದ ಮುಹಮ್ಮದ್ ಇಕ್ಬಾಲ್ ಹಾಗೂ ನಿಝಾಮ್ ಎಂಬವರನ್ನು ಈ ಕೇಸ್‌ನಲ್ಲಿ ಫಿಕ್ಸ್ ಮಾಡಲಾಗಿದೆ. ಇವರಲ್ಲಿ ಡಿ.28ರಂದು ನೌಫಾಲ್‌ನನ್ನು ಹಾಗೂ ಡಿ.30ರಂದು ಮುಹಮ್ಮದ್ ಇಕ್ಬಾಲ್ ಅವರ ಮಗ ನಿಝಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿ ಇದೀಗ ನ್ಯಾಯಾಲಕ್ಕೆ ಹಾಜರು ಪಡಿಸಿ, ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ ಎಂದು ಹೇಳಿದರು.
ಅಕ್ರಮ ಬಂಧನದ ಬಗ್ಗೆ ಪಕ್ಷವು ಪೊಲೀಸರನ್ನು ಸಂಪರ್ಕಿಸಿದಾಗ " ತನಿಖೆಗಾಗಿ ಇವರನ್ನು ವಶಪಡಿಸಿಕೊಂಡಿದ್ದೇವೆ, ವಿಚಾರಣೆ ಮಾಡಿ ಬಿಡುತ್ತೇವೆ" ಎಂದಿದ್ದರು. ಆದರೆ ಇಲ್ಲಿನ ಪೊಲೀರು ನೈಜ ಆರೋಪಿಗಳನ್ನು ಬಂಧಿಸದೇ ಮೂವರು ಅಮಾಯಕರನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಕೊಲೆ ಅರೋಪಿಗಳಿಗೆ ಶಿಕ್ಷೆಯಾಗಲಿ, ಆದರೆ ನಿರಪರಾಧಿಗಳನ್ನು ಬಂಧಿಸಿರುವುದು ಸರಿಯಲ್ಲ ಎಂದು ತಿಳಿಸಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಎಸ್‌ಡಿಪಿಐ ಅಧ್ಯಕ್ಷ ಶಾಹುಲ್ ಎಸ್.ಎಚ್. ಮಾತನಾಡಿ, ಯಾವುದೇ ಘಟನೆಗಳು ನಡೆದರೆ ಸಂಘ ಹಾಗೂ ಪಕ್ಷದ ಹೆಸರನ್ನು ಕೆಲವೊಂದು ಮಾಧ್ಯಮಗಳಲ್ಲಿ ಅನಾವಶ್ಯಕವಾಗಿ ಸಂಬಂಧ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ಎಸ್‌ಡಿಪಿಐ ಖಂಡಿಸುತ್ತದೆ ಎಂದರು.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಪ್ರಕರಣದಲ್ಲಿ ಜಲೀಲ್ ಕರೋಪಾಡಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯ ಕೇಸ್‌ಅನ್ನು ಕೈಬಿಡುವಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಅದೇ ರೀತಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕರೀಂ ಎಂಬವರು ನೀಡಿರುವ ದೂರು ಹಾಗೂ ಅಶ್ರಫ್ ಕಳಾಯಿ ಹತ್ಯೆ ಆರೋಪಿಗಳ ಮೇಲೆ ಇದ್ದಂತಹ ಇನ್ನೊಂದು ಪ್ರಕರಣವನ್ನೂ ಕೂಡಾ ಕೈಬಿಡುವಂತೆ ನ್ಯಾಯಾಲಕ್ಕೆ ವರದಿ ಸಲ್ಲಿಸಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ರೀತಿಯ ಹೋರಾಟ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಮುಖಂಡರಾದ ಅಬ್ದುಲ್ ಸತ್ತಾರ್, ಇಕ್ಬಾಲ್, ನಝೀರ್ ಮತ್ತಿತರರು ಇದ್ದರು.