ಜನರ ಗಮನ ಬೇರೆಡೆ ಸೆಳೆಯಲು ‘ಡೆಡ್ ಬಾಡಿ ಪಾಲಿಟಿಕ್ಸ್ ’ ನಡೆಯುತ್ತಿದೆ: ಸೀತಾರಾಂ ಯೆಚೂರಿ
ಮೂಡುಬಿದಿರೆ, ಜ. 4: ಕೋಮುವಾದಿ ರಾಜಕೀಯದ ಪ್ರಯೋಗ ಶಾಲೆಯನ್ನಾಗಿ ಮಾಡಲು ಹೊರಟಿರುವ ಕರಾವಳಿಯಲ್ಲಿ ಹಾಗೂ ಇತರ ಕಡೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭ ಜನರ ಗಮನವನ್ನು ಬೇರೆಡೆ ಸೆಳೆಯಲು ದ್ವೇಷದ ರಾಜಕಾರಣ, ‘ಡೆಡ್ ಬಾಡಿ ಪಾಲಿಟಿಕ್ಸ್’ ನಡೆಯುತ್ತಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.
ಮೂಡುಬಿದಿರೆಯಲ್ಲಿ ಜ. 2ರಿಂದ ಆರಂಭಗೊಂಡು ನಡೆಯುತ್ತಿರುವ ನಾಲ್ಕು ದಿನಗಳ ಸಿಪಿಐ(ಎಂ)ನ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿರುವ ಅವರು ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಕಳೆದ ಮೂರು ವರ್ಷದಲ್ಲಿ ದೇಶದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗದೆ ಇರುವುದು ಸಾಭೀತಾಗಿದೆ. ಈ ಹಿಂದಿನ ಸರಕಾರಕ್ಕಿಂತಲೂ ಪ್ರಬಲವಾಗಿ ನವ ಉದಾರೀಕರಣ ಆರ್ಥಿಕ ನೀತಿಯನ್ನು ಜಾರಿಗೊಳಿಸುತ್ತಿದೆ. ಪರಿಣಾಮವಾಗಿ ಈ ದೇಶ ಬಡವರ ಮತ್ತು ಶ್ರೀಮಂತರ ಭಾರತ ಎಂದು ಸ್ಪಷ್ಟವಾಗಿ ಎರಡು ವಿಭಾಗಗಳಾಗಿವೆ. ದೇಶದಲ್ಲಿ ಬಡವರ ಅಭಿವೃದ್ಧಿಗೆ ಬೇಕಾಗುವ ಸಂಪತ್ತು ಇದ್ದರೂ ಅದನ್ನು ಬಳಕೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಒಂದು ಕಡೆ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚುತ್ತಿದೆ. ಬ್ಯಾಂಕ್‌ಗಳ ಮೂಲಕ 11 ಲಕ್ಷ ಕೋಟಿ ರೂಪಾಯಿಯ ಸಾರ್ವಜನಿಕ ಹಣವನ್ನು ಲೂಟಿ ಮಾಡಲು ಸರಕಾರ ಅವಕಾಶ ಮಾಡಿ ಕೊಟ್ಟಿದೆ. ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಮೊತ್ತ ಹೆಚ್ಚಿದೆ. ಇನ್ನೊಂದು ಕಡೆ ರೈತರ ಆತ್ಮ ಹತ್ಯೆ ಹೆಚ್ಚುತ್ತಿದೆ. ಸಾವಿರಾರು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಗೋ ರಕ್ಷಣೆ, ಅನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಕರಾವಳಿಯಲ್ಲಿ ಹಾಗೂ ಇತರ ಕಡೆ ಜನಸಾಮಾನ್ಯರಿಗೆ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಪ್ರಧಾನಿ ಚುನಾವಣೆಯ ಸಂದರ್ಭ ದಲ್ಲಿ ಕೋಮು ಧ್ರುವೀಕರಣಗೊಳಿಸುವ ಕೆಲಸದಲ್ಲಿ ತೊಡಗುತ್ತಾರೆ. ಗುಜರಾತ್ ಮಾದರಿಯ ಸರಕಾರವನ್ನು ಜಾರಿಗೆ ತರುವ ಮಾತುಗಳನ್ನು ಆಡುತ್ತಾರೆ. ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ ಮೋದಿ ಸರಕಾರ ಈ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಲ್ಲದೆ ಐ.ಟಿ. ರಂಗದಲ್ಲೂ 60 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಹೊರ ಗುತ್ತಿಗೆಯ ಮೇಲೆ ನಿರ್ಬಂಧ ಹೇರಿರುವ ಪರಿಣಾಮವಾಗಿ ಐಟಿ ಕ್ಷೇತ್ರದಲ್ಲಿ ಇನ್ನಷ್ಟು ಉದ್ಯೋಗ ಕಡಿತಗೊಳ್ಳಲು ಕಾರಣವಾಗಿದೆ ಎಂದು ಸೀತಾರಾಂ ಯೆಚೂರಿ ತಿಳಿಸಿದ್ದಾರೆ.
ಅಮೇರಿಕಾ -ಇಸ್ರೇಲ್ ಜೊತೆ ಒಡಂಬಡಿಕೆ :- ದೇಶದ ಪ್ರಧಾನಿ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದಂತೆ ಅಮೇರಿಕಾ, ಇಸ್ರೇಲ್ ಜೊತೆ ಮಾಡಿಕೊಂಡಿರುವ ಒಪ್ಪಂದ ದೇಶದ ಸಾರ್ವಭೌಮತೆಗೆ ಸಂಬಂಧಿಸಿದಂತೆ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಸೀತಾರಾಂ ಯೆಚೂರಿ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಸಮಾನ ಮನಸ್ಕ ಪಕ್ಷಗಳು ಹಾಗೂ ಸಂಘಟನೆಗಳೊಂದಿಗೆ ಪರ್ಯಾಯ ರಾಜಕೀಯಕ್ಕಾಗಿ ಹೋರಾಟ ನಡೆಸಲಿದೆ. ಮುಂದಿನ ಚುನಾವಣೆಯಲ್ಲಿ ಸಿಪಿಐ(ಎಂ) ಈ ನೆಲೆಯಲ್ಲಿ ಕೇವಲ ರಾಜಕೀಯ ಪಕ್ಷಗಳ ಮೂಲಕ ಮಾತ್ರವಲ್ಲ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಸಂಘಟನೆಗಳು, ರೈತರು, ಭೂಮಿಯ ಮೇಲಿನ ಅಧಿಕಾರ, ಕಾರ್ಮಿಕರ ಸಮಸ್ಯೆಗಳ ಪರವಾಗಿ ಹೋರಾಟ ನಡೆಸುವವರ ಜೊತೆ ಸೇರಿ ಜನರ ಸಮಸ್ಯೆಗಳಿಗಾಗಿ ಜನ ಸಂಘಟನೆಯೊಂದಿಗೆ ಈ ಹೋರಾಟ ನಡೆಸಲಿದೆ ಎಂದು ಸೀತಾರಾಂ ಯೆಚೂರಿ ತಿಳಿಸಿದ್ದಾರೆ.