'ದ.ಕ.ಜಿಲ್ಲೆಯ ಅಹಿತಕರ ಘಟನೆ: ಸಂಸದರಾದ ಶೋಭಾ, ಪ್ರತಾಪ ಸಿಂಹ ತನಿಖೆಯಾಗಲಿ'
ಮಂಗಳೂರು, ಜ.4: ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುವ ಅಹಿತಕರ ಘಟನೆಯ ಹಿಂದೆ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಪ್ರತಾಪ ಸಿಂಹ ಅವರ ಕೈವಾಡವಿದೆ. ಹಾಗಾಗಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ನೇಮಕ ಮಾಡಿ ಸಂಸದರನ್ನು ವಿಚಾರಣೆಗೊಳಪಡಿಸಬೇಕು ಎಂದು ಎಸ್‌ಡಿಪಿಐ ಒತ್ತಾಯಿಸಿದೆ.
ಗುರುವಾರ ಪಕ್ಷದ ಕಚೇರಿಯಲ್ಲಿ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಮಾತನಾಡಿ, ದೀಪಕ್ ರಾವ್ ಕೊಲೆ ಸಹಿತ ದ.ಕ.ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ. ಮುಂದಿನ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿ ‘ಶವ ರಾಜಕೀಯ’ ಮಾಡಲಾಗುತ್ತದೆ ಎಂದು ಆರೋಪಿಸಿದರು.
ದೀಪಕ್ ರಾವ್ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಪಿಂಕಿ ನವಾಝ್ ಮತ್ತು ತಂಡ ಬಿಜೆಪಿಯಲ್ಲಿ ಗುರುತಿಸಿದ್ದಾರೆ, ಸ್ಥಳೀಯ ಬಿಜೆಪಿ ನಾಯಕರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗಾಗಿ ದುಡಿದಿದ್ದಾರೆ. ಈ ತಂಡದ ಮೇಲೆ 16 ಪ್ರಕರಣ ದಾಖಲಾಗಿದೆ. ಕ್ರಿಮಿನಲ್ ಹಿನ್ನೆಲೆಯ ಪಿಂಕಿ ನವಾಝ್ ತಂಡವನ್ನು ಬಿಜೆಪಿ ಬಳಸಿಕೊಂಡು ತನ್ನದೇ ಕಾರ್ಯಕರ್ತನನ್ನು ಹತ್ಯೆ ಮಾಡಿರುವುದರ ಹಿಂದೆ ಜಿಲ್ಲೆಯಲ್ಲಿ ಚುನಾವಣಾ ಪೂರ್ವ ಗಲಭೆಯ ಸೃಷ್ಟಿಸುತ್ತದೆ ಎಂಬ ಸಂಶಯ ಇದೆ. ಹಾಗಾಗಿ ರಾಜ್ಯ ಸರಕಾರ ಇದನ್ನು ವಿಶೇಷ ಘಟಕ ಎಂದು ಪರಿಗಣಿಸಿ ಎಸ್‌ಐಟಿ ನೇಮಕ ಮಾಡಬೇಕು ಎಂದು ಹನೀಫ್ ಖಾನ್ ಕೊಡಾಜೆ ಒತ್ತಾಯಿಸಿದರು.
ಉಸ್ತುವಾರಿ ಸಚಿವರ ಬಾಲಿಶ ಹೇಳಿಕೆ: ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು ಅಹಿತಕರ ಘಟನೆ ನಡೆದಾಗಲೆಲ್ಲಾ ಸಂಘಪರಿವಾರಕ್ಕಿಂತಲೂ ಕೀಳಾದ ಭಾಷೆಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐಯನ್ನು ದೂಷಿಸುವುದು ಖಂಡನೀಯ. ಇದು ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ರಾಜ್ಯ ಗೃಹ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ದಾರಿ ತಪ್ಪಿಸುತ್ತಿದ್ದಾರೆ. ರಮಾನಾಥ ರೈಯ ಮಾತು ಕೇಳಿ ಗೃಹ ಸಚಿವರು ಕೂಡ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ವೈದ್ಯಕೀಯ ವೆಚ್ಚ ಭರಿಸಿ: ಸುರತ್ಕಲ್ ಮತ್ತು ಕೊಟ್ಟಾರ ಚೌಕಿಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಬಶ್ಶಿರ್ ಮತ್ತು ಬಶೀರ್ ಅವರಿಗೆ ಪರಿಹಾರ ನೀಡುವುದರೊಂದಿಗೆ ವೈದ್ಯಕೀಯ ವೆಚ್ಚ ಭರಿಸಲು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ. ಅಥಾವುಲ್ಲಾ, ಕೋಶಾಧಿಕಾರಿ ಇಕ್ಬಾಲ್ ಐಎಂಆರ್., ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ನಾಸಿರ್ ಉಳಾಯಿಬೆಟ್ಟು ಉಪಸ್ಥಿತರಿದ್ದರು.