ಪೊಲೀಸ್ ದೌರ್ಜನ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಕಲಾವಿದನ ಭೇಟಿ
Update: 2018-01-04 20:30 IST
ಮಂಗಳೂರು, ಜ.4: ಸುಬ್ರಮಣ್ಯ ಠಾಣೆಯಲ್ಲಿ ಸಂಘಪರಿವಾರ ಮತ್ತು ಪೊಲೀಸರು ಜಂಟಿಯಾಗಿ ಠಾಣೆಯ ಗೋದಾಮಿನಲ್ಲಿ ನಡೆಸಿದ್ದಾರೆನ್ನಲಾದ ಹಲ್ಲೆಯಿಂದ ಗಾಯಗೊಂಡು ಇದೀಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ಳಾರೆಯ ಕಲಾವಿದ ಫರ್ವೀಝ್‌ರನ್ನು ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಮುಖಂಡರು ಭೇಟಿ ಮಾಡಿ ಸಾಂತ್ವನ ಹೇಳಿದರು.
ಇತ್ತೀಚೆಗೆ ಪಿಲಿಕುಳದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ಕೃತ್ಯವನ್ನೂ ಒಕ್ಕೂಟ ಖಂಡಿಸಿದೆ. ಎರಡೂ ಘಟನೆಯಲ್ಲಿ ಪೊಲೀಸರ ತಪ್ಪು ಕಾಣುತ್ತಿದ್ದು, ಇಲಾಖಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಪೊಲೀಸರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದೆ.
ಆಸ್ಪತ್ರೆಗೆ ಭೇಟಿ ನೀಡಿದ ನಿಯೋಗದಲ್ಲಿ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಹಮೀದ್ ಕುದ್ರೋಳಿ, ಮುಹಮ್ಮದ್ ಹನೀಫ್ ಯು., ಸುಹೈಲ್ ಕಂದಕ್, ಸಿದ್ದೀಕ್ ತಲಪಾಡಿ, ಎಚ್. ಅಬ್ದುಲ್ ಕರೀಂ, ಎಫ್.ಎ. ಖಾದರ್ ಉಪಸ್ಥಿತರಿದ್ದರು.